ಮುಂಬೈ: ಜಾಗತಿಕ ಹೂಡಿಕೆ ಸಂಸ್ಥೆ ಕೆಕೆಆರ್ನಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ಆರ್ವಿಎಲ್)ನಲ್ಲಿ 5,500 ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಬುಧವಾರ ಘೋಷಣೆ ಮಾಡಿದೆ.
ಆರ್ಆರ್ವಿಎಲ್ ಪ್ರೀ-ಮನಿ ಈಕ್ವಿಟಿ ಮೌಲ್ಯ 4.21ಲಕ್ಷ ಕೋಟಿಯಿದೆ. ಅದರ ಆಧಾರದಲ್ಲಿ ಹೇಳುವುದಾದ್ರೆ, ಈಗ ಕೆಕೆಆರ್ ಹೂಡಿಕೆ ಮಾಡುತ್ತಿರುವ ಮೊತ್ತಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ನಲ್ಲಿ 1.28 ಪರ್ಸೆಂಟ್ ಪಾಲು ದೊರೆತಂತಾಗುತ್ತದೆ. ಈ ಹಿಂದೆ ಕೆಕೆಆರ್ನಿಂದಲೇ ರಿಲಯನ್ಸ್ಗೆ ಸೇರಿದ ಜಿಯೋ ಪ್ಲಾಟ್ಫಾರ್ಮ್ನಲ್ಲಿ 11,367 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ಆರ್ಆರ್ವಿಎಲ್ ಅಂಗ ಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶವಿದೆ.
![KKR invest ₹ 5,550 crore in Reliance Retail Ventures Limited](https://etvbharatimages.akamaized.net/etvbharat/prod-images/picture---sh-mukesh-ambani-quotes1600868722911-37_2309email_1600868734_148.jpeg)
ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ರಿಲಯನ್ಸ್ ರೀಟೇಲ್ ವೆಂಚರ್ಸ್ನಲ್ಲಿ ಹೂಡಿಕೆದಾರರಾಗಿ ಕೆಕೆಆರ್ ಸ್ವಾಗತಿಸಲು ಸಂತೋಷವಾಗುತ್ತದೆ. ಎಲ್ಲ ಭಾರತೀಯರ ಅನುಕೂಲಕ್ಕಾಗಿ ಭಾರತದ ರೀಟೇಲ್ ವ್ಯವಸ್ಥೆಯಲ್ಲಿ ಬೆಳವಣಿಗೆ ಹಾದಿಯಲ್ಲಿ ಮುಂದಕ್ಕೆ ಸಾಗುತ್ತಿದ್ದೇವೆ.
ಕೆಕೆಆರ್ ದಾಖಲೆಗಳಿಂದ ಈಗಾಗಲೇ ಅದು ಅತ್ಯಂತ ಹಲವು ಪ್ರಮುಖ ಸಂಸ್ಥೆಗಳ ಮೌಲ್ಯಯುತ ಸಹಭಾಗಿ ಎಂದು ಸಾಬೀತಾಗಿದೆ ಮತ್ತು ಭಾರತದ ಜತೆಗೆ ಹಲವು ವರ್ಷಗಳಿಂದ ಇದೆ. ನಮ್ಮ ಡಿಜಿಟಲ್ ಸೇವೆ ಹಾಗೂ ರೀಟೇಲ್ ವ್ಯವಹಾರದಲ್ಲಿ ಕೆಕೆಆರ್ನ ಜಾಗತಿಕ ಪ್ಲಾಟ್‌ಫಾರ್ಮ್ ಜತೆಗೆ ಕೆಲಸ ಮಾಡಲು ಎದುರು ನೋಡುತ್ತೇವೆ ಎಂದಿದ್ದಾರೆ.
![KKR invest ₹ 5,550 crore in Reliance Retail Ventures Limited](https://etvbharatimages.akamaized.net/etvbharat/prod-images/picture---sh-henry-kravis-quotes1600868722912-41_2309email_1600868734_91.jpeg)
ಕೆಕೆಆರ್ ಸಹ ಸಂಸ್ಥಾಪಕ ಹೆನ್ರಿ ಕ್ರೇವೀಸ್ ಪ್ರತಿಕ್ರಿಯಿಸಿ, ರಿಲಯನ್ಸ್ ರೀಟೇಲ್ ವೆಂಚರ್ಸ್ನಲ್ಲಿ ಈ ಹೂಡಿಕೆ ಮಾಡುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಜತೆಗಿನ ನಮ್ಮ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತಿದೆ ಎಂಬುದಕ್ಕೆ ಸಂತೋಷವಾಗುತ್ತಿದೆ. ರಿಲಯನ್ಸ್ ರೀಟೇಲ್ ವೆಂಚರ್ಸ್ ಎಲ್ಲ ಪ್ರಮಾಣದ ವರ್ತಕರನ್ನೂ ಸಬಲಗೊಳಿಸುತ್ತಿದೆ ಮತ್ತು ಭಾರತದ ಗ್ರಾಹಕರ ರೀಟೇಲ್ ಅನುಭವವನ್ನೇ ಮೂಲಭೂತವಾಗಿ ಬದಲಾವಣೆ ಮಾಡುತ್ತಿದೆ. ಗ್ರಾಹಕರು ಹಾಗೂ ಸಣ್ಣ ವ್ಯವಹಾರಗಳ ಪಾಲಿನ ಬಹುಮುಖ್ಯ ಅಗತ್ಯವನ್ನು ರಿಲಯನ್ಸ್ ರೀಟೇಲ್ನ ಈ ಹೊಸ ವ್ಯಾಪಾರ ಪ್ಲಾಟ್ ಫಾರ್ಮ್ ಪೂರ್ಣಗೊಳಿಸುತ್ತಿದೆ ಎಂದಿದ್ದಾರೆ.
ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಆನ್ಲೈನ್ ಶಾಪಿಂಗ್ ಮಾಡುತ್ತಿದ್ದಾರೆ. ಕಂಪನಿಯಿಂದ ಕಿರಾಣಿ ಅಂಗಡಿಗಳಿಗೆ ಪೂರೈಕೆ ಜಾಲದ ಬಹು ಅಮೂಲ್ಯ ಭಾಗ ಒದಗಿಸಲಾಗುತ್ತಿದೆ. ಭಾರತದ ಪ್ರಮುಖ ರೀಟೇಲರ್ ಆಗುವ ನಿಟ್ಟಿನಲ್ಲಿ ಹಾಕುತ್ತಿರುವ ಪ್ರಯತ್ನಕ್ಕೆ ಹಾಗೂ ಭಾರತೀಯ ರೀಟೇಲ್ ಆರ್ಥಿಕತೆಯನ್ನು ರೂಪಿಸಿಸಲು ಹಾಕಿಕೊಂಡಿರುವ ಗುರಿಯನ್ನು ತಲುಪುವುದಕ್ಕೆ ನಾವು ಬೆಂಬಲಿಸುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.
ಕೆಕೆಆರ್ನಿಂದ ಏಷ್ಯಾ ಪ್ರೈವೇಟ್ ಈಕ್ವಿಟ್ ಫಂಡ್ಸ್ ಮೂಲಕ ಹೂಡಿಕೆ ಮಾಡಲಾಗುತ್ತದೆ. ಈ ವ್ಯವಹಾರವು ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಅಂತಿಮವಾಗುತ್ತದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸೈರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು. ಡೆಲಾಯಿಟ್ ಟಚೆ ಟೊಮಾಟ್ಸು ಇಂಡಿಯಾ ಎಲ್ಎಲ್ಪಿ ಕೆಕೆಆರ್ಗೆ ಆರ್ಥಿಕ ಸಲಹೆಗಾರ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿತ್ತು.