ಹೈದರಾಬಾದ್: ಮಾಜಿ ಕ್ರೀಡಾಪಟು ಪ್ರವೀಣ್ ರಾವ್ ಮತ್ತು ಆತನ ಸಹೋದರನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮಾಜಿ ಸಚಿವೆ ಭೂಮಾ ಅಖಿಲಪ್ರಿಯ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೋಯನಪಲ್ಲಿ ಪೊಲೀಸರು ಭೂಮಾ ಅಖಿಲಪ್ರಿಯ ಅವರನ್ನು ವಿಚಾರಣೆ ನಡೆಸುತ್ತಿದ್ದು, ಆಕೆಯ ಪತಿ ಭಾರ್ಗವ ರಾಮ್ ತಲೆಮರೆಸಿಕೊಂಡಿದ್ದಾನೆ.
ಮಂಗಳವಾರ ರಾತ್ರಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಂಡ 15 ಮಂದಿಯ ಗುಂಪೊಂದು ಮಾಜಿ ಕ್ರೀಡಾಪಟು ಹಾಗೂ ಸಿಎಂ ಚಂದ್ರಶೇಖರ್ ರಾವ್ ಅವರ ಸಂಬಂಧಿಯಾದ ಪ್ರವೀಣ್ ರಾವ್ ಅವರ ಮನೆಗೆ ನುಗ್ಗಿದ್ದರು.
ಇದನ್ನೂ ಓದಿ: ಸ್ನೇಹಿತನ ಕೊಲೆ ಮಾಡಿ ಶವವನ್ನು ನೀರಿನ ಸಂಪ್ಗೆ ಎಸೆದಿದ್ದ ಹಂತಕ ಅಂದರ್
ಈ ವೇಳೆ ಕೆಲವೊಂದು ಕಾಗದ ಪತ್ರಗಳಿಗೆ ಕೂಡಾ ಸಹಿ ಮಾಡಿಸಿಕೊಂಡಿದ್ದಾರೆ. ಈ ಪತ್ರಗಳು ಜಮೀನು ವಿವಾದಕ್ಕೆ ಸಂಬಂಧಿಸಿವೆ. ನಂತರ ಅವರನ್ನು ಬೆದರಿಸಿ ಕರೆದುಕೊಂಡು ಹೋಗಲಾಗಿದೆ ಎಂದು ಪ್ರವೀಣ್ ಕುಮಾರ್ ಕುಟುಂಬದ ಸದಸ್ಯ ಪ್ರತಾಪ್ ರಾವ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನು ಬಂಧಿಸಿದ್ದಾರೆ. ಜೊತೆಗೆ ಅಪಹರಣಕ್ಕೆ ಒಳಗಾಗಿದ್ದ ಪ್ರವೀಣ್ ರಾವ್ ಮತ್ತು ಆತನ ಸಹೋದರರನ್ನು ರಕ್ಷಿಸಿದ್ದಾರೆ.
ಪ್ರವೀಣ್ ರಾವ್ ಮತ್ತು ಮಾಜಿ ಸಚಿವೆ ಭೂಮಾ ಅಖಿಲಪ್ರಿಯ ಅವರ ಕುಟುಂಬಗಳ ನಡುವೆ ಜಮೀನು ವಿವಾದವಿದ್ದು, ಸಂಶಯದ ಆಧಾರದ ಮೇಲೆ ಪೊಲೀಸರು ಮಾಜಿ ಸಚಿವೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಾಜಿ ಸಚಿವೆಯ ಪತಿ ಭಾರ್ಗವ ರಾಮ್ ಪರಾರಿಯಾಗಿದ್ದಾನೆ.