ಇಡುಕ್ಕಿ : ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿ ಉಡುಂಬಂಚೋಳದಲ್ಲಿ ಪ್ರವೇಶಿಸುವ ಕಾಡು ಆನೆಗಳ ಮೇಲೆ ನಿಗಾ ಇಡಲು ಒಂಬತ್ತನೇ ತರಗತಿ ವಿದ್ಯಾರ್ಥಿ ಜೋಯಲ್ ಡ್ರೋನ್ ನಿರ್ಮಿಸಿದ್ದಾನೆ.
ಕಾಡು ಆನೆಗಳು, ಇಲ್ಲಿನ ಅರಣ್ಯ ಪ್ರದೇಶದಿಂದ ಹೆಚ್ಚಾಗಿ ಜನವಸತಿ ಪ್ರದೇಶಗಳು ಮತ್ತು ಕೃಷಿಭೂಮಿಗಳನ್ನು ಪ್ರವೇಶಿಸಿ, ಅರಣ್ಯ ಅಂಚಿನಲ್ಲಿ ವಾಸಿಸುವ ಜನರ ಜೀವ, ಬೆಳೆಗಳು ಮತ್ತು ಆಸ್ತಿಗಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ಗಡಿಗಳಲ್ಲಿರುವ ಜನರಿಗೆ ಯಾವಾಗಲೂ ಅಪಾಯಕಾರಿಯಾದ ಕಾಡಾನೆಗಳ ಮೇಲ್ವಿಚಾರಣೆ ಮಾಡಲು ಮತ್ತು ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯರು ಅನೇಕ ಮಾರ್ಗಗಳನ್ನು ಪ್ರಯೋಗಿಸಿದ್ದಾರೆ. ಹೀಗೆ ಪ್ರಯತ್ನಿಸಿದ ಹೆಚ್ಚಿನ ವಿಧಾನಗಳು ವಿಫಲವಾಗಿವೆ.
ಆನೆಗಳ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುವ ಇತರ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದ್ದರಿಂದ, ಉಡುಂಬಂಚೋಳದ 9 ನೇ ತರಗತಿಯ ವಿದ್ಯಾರ್ಥಿ ಜೋಯಲ್, ಲಾಕ್‌ಡೌನ್ ಅವಧಿಯಲ್ಲಿ ಡ್ರೋನ್ ನಿರ್ಮಿಸಲು ಪ್ರಾರಂಭಿಸಿದ. ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಆನ್‌ಲೈನ್‌ನಲ್ಲಿ ಡ್ರೋನ್ ತಯಾರಿಸಲು ಬೇಕಾದ ಎಲ್ಲಾ ವಸ್ತುಗಳನ್ನು ಜೋಯಲ್ ತರಿಸಿಕೊಂಡ.
ಕೇರಳ ಫ್ಲೈಯರ್ಸ್ ಕ್ಲಬ್ ಹೆಸರಿನ ತಾಂತ್ರಿಕ ತಜ್ಞರ ಗುಂಪು, ವಾಟ್ಸಾಪ್ ಮತ್ತು ಫೋನ್ ಮೂಲಕ ಡ್ರೋನ್ ತಯಾರಿಸುವ ಪ್ರಕ್ರಿಯೆಯನ್ನು ತಿಳಿಸುವ ಮೂಲಕ ಜೋಯಲ್ ಅವರಿಗೆ ಸಂಪೂರ್ಣ ಸಹಾಯ ಮಾಡಿತು.
ಅಂತಿಮವಾಗಿ 25,000 ರೂ. ವೆಚ್ಚದಲ್ಲಿ ಡ್ರೋನ್ ಅನ್ನು ತಯಾರಿಸಬಹುದೆಂದು ಅಂದಾಜಿಸಿಕೊಂಡ ಜೋಯಲ್, ತನ್ನ ಅಲಂಕಾರಿಕ ಮೀನುಗಳು ಮತ್ತು ಪಕ್ಷಿಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ಸಂಗ್ರಹಿಸಿದ. ಬಳಿಕ ಅವಿರತ ಶ್ರಮದಿಂದ ಡ್ರೋನ್ ತಯಾರಿಸಿದ್ದಾನೆ.
ಗಡಿ ಪ್ರದೇಶದ ಅರಣ್ಯ ಇಲಾಖೆಯ ಸಿಬ್ಬಂದಿ ಸಹಕಾರದೊಂದಿಗೆ ಕಾಡು ಆನೆಗಳನ್ನು ವೀಕ್ಷಿಸಲು ಡ್ರೋನ್ ಕ್ಯಾಮೆರಾ ಕಣ್ಗಾವಲು ನಡೆಸಲು ಜೋಯಲ್ ಯೋಜಿಸಿದ. ಆ ಬಳಿಕ ಜೋಯಲ್ ಡ್ರೋನ್ ಆನೆಗಳ ಚಲನೆಯನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ ಎಂಬುದು ನಿಖರವಾಗಿದೆ.