ತಿರುವನಂತಪುರಂ(ಕೇರಳ): ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮದ್ಯ ಮಾರಾಟವನ್ನು ಕೇರಳ ರಾಜ್ಯ ಪಾನೀಯಗಳ ನಿಗಮ ಗುರುವಾರದಿಂದ ಪುನಾರಂಭಿಸಿದೆ.
ಮದ್ಯದಂಗಡಿ ಮುಂದೆ ಜನರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಬೇವ್ ಕ್ಯೂ (Bev Q) ಎಂಬ ಮೊಬೈಲ್ ಆ್ಯಪ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಈ ಆ್ಯಪ್ ಮೂಲಕ ಮೊದಲೆ ಬುಕ್ ಮಾಡಿ ಪೂರ್ವನಿರ್ಧರಿತ ಸಮಯದಲ್ಲಿ ಮದ್ಯದಂಗಡಿಗಳಿಂದ ಪಾರ್ಸೆಲ್‌ಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.
ವರದಿಗಳ ಪ್ರಕಾರ, ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಮಾತ್ರ ಮದ್ಯಮಾರಾಟ ಮಾಡಲಾಗುತ್ತದೆ. 'ಒಂದು ಸಮಯದಲ್ಲಿ ಐದಕ್ಕಿಂತ ಹೆಚ್ಚು ಜನರು ಮದ್ಯದಂಗಡಿ ಮುಂದೆ ನಿಲ್ಲುವಂತಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷ ಅಂದರೆ, ಮದ್ಯದಂಗಡಿ ಮುದೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು ಮತ್ತು ಕೊರೊನಾ ವೈರಸ್ನ ಲಕ್ಷಣಗಳು ಕಂಡುಬರುವವರಿಗೆ ಮದ್ಯವನ್ನು ಖರೀದಿಸಲು ಅನುಮತಿಸಲಾಗುವುದಿಲ್ಲ ಎಂದು ಮಾಹಿತಿ ನಿಡಿದ್ದಾರೆ.
ಈ ಆ್ಯಪ್ ಪ್ರಾರಂಭವಾದಾಗಿನಿಂದ ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ 1,15,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಸ್ವೀಕರಿಸಲಾಗಿದೆ. ಎಸ್‌ಎಂಎಸ್ ಸೌಲಭ್ಯವನ್ನು ಕೂಡ ಮದ್ಯ ಖರೀದಿಸಲು ಬಳಸಿಕೊಳ್ಳಬಹುದು ಎಂದು ಮೂಲವೊಂದು ತಿಳಿಸಿದೆ.
ಆ್ಯಪ್ ಮೂಲಕ ಬುಕ್ ಮಾಡಿದರೆ ಇಂತಾ ಸಮಯದಲ್ಲೆ ಬರಬೇಕೆಂದು ಟೋಕನ್ ನೀಡಲಾಗುತ್ತದೆ. ಒಂದು ವೇಳೆ ನಿಗದಿತ ಸಮಯಕ್ಕಿಂತ ತಡವಾಗಿ ಹೋದರೆ ಮದ್ಯ ನೀಡುವುದಿಲ್ಲ. ಆವ್ಯಕ್ತಿ ಮತ್ತೆ ಬುಕ್ಕಿಂಗ್ ಮಾಡಬೇಕಾಗುತ್ತದೆ. ಒಂದು ಬಾರಿ ಮದ್ಯಪಡೆದ ವ್ಯಕ್ತಿ ಮತ್ತೆ 5 ದಿನದ ನಂತರವಷ್ಟೆ ಮತ್ತೆ ಮದ್ಯ ಖರೀದಿಸಲು ಸಾಧ್ಯ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಮದ್ಯ ಪಡೆಯಲು ಖರೀದಿದಾರರು ಕೆಲವು ಗುರುತಿನ ಚೀಟಿಯನ್ನೂ ತೋರಿಸಬೇಕು. ಇದಲ್ಲದೆ, ಸ್ಮಾರ್ಟ್ ಫೋನ್ ಇ-ಟೋಕನ್ ಕಾಯ್ದಿರಿಸುವ ಗ್ರಾಹಕರು ಕ್ಯೂಆರ್ ಕೋಡ್ ಅನ್ನು ಪಡೆಯುತ್ತಾರೆ. ಇದನ್ನು ನೋಂದಾಯಿತ ಮೊಬೈಲ್ ಬಳಸಿ ಸ್ಕ್ಯಾನ್ ಮಾಡಬೇಕಾಗುತ್ತದೆ.