ಹೈದರಾಬಾದ್: ಕೊರೊನಾ ಸೋಂಕು ಪ್ರಕರಣಗಳು ಮೊದಲ 100ರ ಸಂಖ್ಯೆ ತಲುಪಲು 64 ದಿನಗಳನ್ನು ತೆಗೆದುಕೊಂಡಿದ್ದರೆ, 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ನಾಟಕೀಯವಾಗಿ ದಾಖಲಾಗಲು ತೆಗೆದುಕೊಂಡಿದ್ದೂ ಅಷ್ಟೇ ದಿನಗಳನ್ನು! ಅಮೆರಿಕ, ಇಟಲಿ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಸ್ಪೇನ್‌ನಂತಹ ದೇಶಗಳಿಗೆ ಹೋಲಿಸಿದರೆ ರೋಗ ನಿಯಂತ್ರಣದಲ್ಲಿ ಭಾರತದ ಸಾಧನೆ ಉತ್ತಮವಾಗಿಯೇ ಇದೆ. ಆದರೆ, ದಿಗ್ಬಂಧನವನ್ನು ಸಡಿಲಗೊಳಿಸಿದ ನಂತರ, ಸಮಯ ಕಳೆದಂತೆ, ಕೋವಿಡ್ ಅತ್ಯಂತ ಅಪಾಯಕವಾಗಿ ವೇಗವಾಗಿ ಪ್ರಸರಣವಾಗಬಹುದು ಎಂಬ ಅಳುಕು ಈಗ ವ್ಯಕ್ತವಾಗತೊಡಗಿದೆ.
ನೀತಿ ಆಯೋಗದ ಪ್ರಕಾರ, ದೇಶದಲ್ಲಿರುವ ಶೇಕಡಾ 70ರಷ್ಟು ಪ್ರಕರಣಗಳು ದಾಖಲಾಗಿರುವುದು ಕೇವಲ 19 ಜಿಲ್ಲೆಗಳಲ್ಲಿ. ಅಮೆರಿಕ, ಸ್ಪೇನ್, ಫ್ರಾನ್ಸ್ ದೇಶಗಳಿಗೆ ಹೋಲಿಸಿದರೆ, ಸಾವಿನ ಪ್ರಮಾಣ ಅಥವಾ ಗುಣಮುಖರಾದ ರೋಗಿಗಳ ಸಂಖ್ಯೆಯಲ್ಲಿ ಮತ್ತು ಕೊರೊನಾ ನಿಯಂತ್ರಣದಲ್ಲಿ ನಾವು ಉತ್ತಮ ಕೆಲಸವನ್ನೇ ಮಾಡುತ್ತಿದ್ದೇವೆ.
ಹೊಂದಾಣಿಕೆ ಸ್ವಭಾವದ ಹಾಗೂ ಎಲ್ಲರಿಗೂ ಸುಲಭವಾಗಿ ಎಟುಕುವುದಕ್ಕೆ ಹೆಸರಾಗಿರುವ ದೇಶಿ ಆರೋಗ್ಯ ವ್ಯವಸ್ಥೆಯಲ್ಲಿ ಕೊರೊನಾ ಸಾಂಕ್ರಾಮಿಕವು ಹಲವಾರು ಸವಾಲುಗಳನ್ನು ಒಡ್ಡಿದೆ. ಇಂತಹ ಸಂಕಷ್ಟಗಳನ್ನು ನಿಭಾಯಿಸುವ ಉದ್ದೇಶದಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇನ್ನಷ್ಟು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಹೂಡಿಕೆ ಮಾಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಸೋಂಕುಗಳ ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ಘಟಕಗಳ ಸೃಷ್ಟಿ ಹಾಗೂ ಬೇರುಮಟ್ಟದಿಂದ ಇವುಗಳ ಹರಡುವಿಕೆಯ ಮೇಲೆ ನಿಗಾ ವಹಿಸಲು ದೇಶದಾದ್ಯಂತ 736 ಜಿಲ್ಲೆಗಳಲ್ಲಿರುವ 7,096 ಘಟಕಗಳಲ್ಲಿ ರೋಗಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವ ಕ್ರಮಗಳು ವಿತ್ತ ಸಚಿವೆ ಘೋಷಿಸಿರುವ ಪ್ಯಾಕೇಜ್‌ಗಳಲ್ಲಿ ಅಡಕವಾಗಿವೆ.
ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬಗಳ ಆರೋಗ್ಯ ರಕ್ಷಣೆಯನ್ನು “ಆಯುಷ್ಮಾನ್ ಭಾರತ” ಯೋಜನೆ ಒಳಗೊಳ್ಳುವ ಭರವಸೆಯನ್ನು ಕೇಂದ್ರ ಸರಕಾರ ನೀಡಿದೆಯಾದರೂ, ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ವಿಸ್ತೃತ ಸುಧಾರಣಾ ಕ್ರಮಗಳ ಮೂಲಕ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರಗಳನ್ನು ಬಿಗಿಗೊಳಿಸಬೇಕಾದ ಅವಶ್ಯಕತೆ ಇದೆ. ಒಟ್ಟು ರಾಷ್ಟ್ರೀಯ ಉತ್ಪನ್ನದ ಕೇವಲ ಶೇಕಡಾ 1.6ರಷ್ಟು ಅನುದಾನವನ್ನು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವುದರಿಂದ, ಇದು ದುರಸ್ತಿಯಾಗದ ಪ್ರಮಾಣದ ದುಃಸ್ಥಿತಿಯಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ 2017ರ ರಾಷ್ಟ್ರೀಯ ಆರೋಗ್ಯ ನೀತಿಯು, 2025ರ ವೇಳೆಗೆ ಈ ಪ್ರಮಾಣವನ್ನು ಶೇಕಡಾ ೨.೫ಕ್ಕೆ ಏರಿಸುವ ತೀವ್ರ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದೆ.
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತನ್ನು ಬಹುತೇಕ ಎಲ್ಲರೂ ಬಲ್ಲರು. ಆದರೆ, ಈ ಪ್ರಾಥಮಿಕ ಸತ್ಯವನ್ನು ಗ್ರಹಿಸಿಕೊಂಡು, ಎಲ್ಲರಿಗೂ ಎಟುಕುವ ರೀತಿಯಲ್ಲಿ ಆರೋಗ್ಯ ರಕ್ಷಣೆ ಒದಗಿಸುವಲ್ಲಿ ಸರಕಾರಗಳು ವಿಫಲವಾಗಿರುವುದರಿಂದ, ಹೆಚ್ಚುತ್ತಲೇ ಇರುವ ವೈದ್ಯಕೀಯ ವೆಚ್ಚಗಳನ್ನು ಭರಿಸಲಾಗದೇ ಪ್ರತಿ ವರ್ಷ ಕೋಟ್ಯಂತರ ಜನರು ಬಡತನದ ದವಡೆಗೆ ಸಿಲುಕುತ್ತಿದ್ದಾರೆ! ಲಕ್ಷಾಂತರ ವೈದ್ಯರು ಮತ್ತು ಶುಶ್ರೂಷಕರ ಕೊರತೆಯನ್ನು ಎದುರಿಸುತ್ತಿರುವ ಭಾರತವು 195 ದೇಶಗಳ ಆರೋಗ್ಯ ರಕ್ಷಣೆಯ ಗುಣಮಟ್ಟ ಹಾಗೂ ಸೇವಾ ಗುಣಮಟ್ಟದ ಮಾನದಂಡದಡಿ 145ನೇ ಸ್ಥಾನದಲ್ಲಿದೆ. ನಮ್ಮ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಹಾಗೂ ಹಳ್ಳಿಗಳಲ್ಲಿ ವಿಸ್ತೃತ ವೈದ್ಯಕೀಯ ಸೇವೆಗಳನ್ನು ಒದಗಿಸಬೇಕೆಂದರೆ ರೂ.30,000 ಕೋಟಿ ಅನುದಾನದ ಅವಶ್ಯಕತೆಯಿದೆ. ಆದರೆ, ನಮ್ಮ ಮುಂಗಡಪತ್ರದಲ್ಲಿ ಇದಕ್ಕೆ ನೀಡಿರುವ ಅನುದಾನ ಕೇವಲ ರೂ.1,350 ಕೋಟಿಗಳು ಮಾತ್ರ!
ಈ ಹಿನ್ನೆಲೆಯಲ್ಲಿ, 15ನೇ ಹಣಕಾಸು ಆಯೋಗ ನೇಮಿಸಿದ್ದ ತಜ್ಞರ ಸಮಿತಿಯು, ಎರಡನೇ ಹಂತ ಮತ್ತು ಮೂರನೇ ಹಂತದ ನಗರಗಳಲ್ಲಿ ಮುಂದಿನ ಐದು ವರ್ಷಗಳ ಒಳಗೆ, ಮೂರರಿಂದ ಐದು ಸಾವಿರದಷ್ಟು 200 ಹಾಸಿಗೆ ಸಾಮರ್ಥ್ಯದ ಸಣ್ಣ ಖಾಸಗಿ ಆಸ್ಪತ್ರೆಗಳನ್ನು ತೆರೆಯುವಂತೆ ಸಲಹೆ ನೀಡಿದೆ. ಅಲ್ಲದೇ, ಆರೋಗ್ಯ ಕ್ಷೇತ್ರದ ಮೂರನೇ ಎರಡಾಂಶದಷ್ಟು ಅನುದಾನವು ಪ್ರಾಥಮಿಕ ಆರೋಗ್ಯ ರಕ್ಷಣೆ ಸೇವೆಗಳಿಗೆ ಹೋಗಬೇಕು ಎಂದೂ ಅದು ಸಲಹೆ ಮಾಡಿದೆ.
ಅದೇ ರೀತಿ, ದೇಶದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಕೂಡಾ ಆರೋಗ್ಯ ವಿಮೆ ವ್ಯಾಪ್ತಿಯಲ್ಲಿ ಇಲ್ಲದಿರುವ ಹಿನ್ನೆಲೆಯಲ್ಲಿ, ಅವರ ಆರೋಗ್ಯ ರಕ್ಷಣೆಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಅಮೆರಿಕದ ಮಾದರಿಯನ್ನು ಅನುಸರಿಸುವಂತೆ ನೀತಿ ಆಯೋಗ ಸಲಹೆ ನೀಡಿದೆ. ಆದರೆ, ಮುಳುಗುತ್ತಿರುವ ದೋಣಿಯಂತಾಗಿರುವ ಆರೋಗ್ಯ ಕ್ಷೇತ್ರವನ್ನು ಉಳಿಸಬೇಕೆಂದರೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವವೊಂದೇ ಅತ್ಯುತ್ತಮ ಪರ್ಯಾಯ ಕ್ರಮವಾಗಬಲ್ಲುದು ಹಾಗೂ ಜಿಲ್ಲಾ ಆಸ್ಪತ್ರೆಗಳನ್ನು ಈ ಖಾಸಗಿ ಸಂಸ್ಥೆಗಳ ವ್ಯಾಪ್ತಿಗೆ ತರುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಶಕ್ತಿ ತುಂಬಲು ಸಾಧ್ಯ ಎಂಬ ಅದರ ಸಲಹೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ದೇಶದ ಪ್ರಧಾನಿಯಿಂದ ಹಿಡಿದು ಸಾಮಾನ್ಯ ವ್ಯಕ್ತಿಯವರೆಗೆ, ಎಲ್ಲರಿಗೂ ಸಮಾನವಾದ ಸುಧಾರಿತ ಆರೋಗ್ಯ ರಕ್ಷಣೆಯನ್ನು ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್ - ನ್ಯಾಶನಲ್ ಹೆಲ್ತ್ ಸರ್ವೀಸ್) ಒದಗಿಸುತ್ತಿದೆ. ಕೇರಳ ಮಾದರಿಯ ಆರೋಗ್ಯ ರಕ್ಷಣಾ ವ್ಯವಸ್ಥೆಯು ಭಾರತದ ಆದರ್ಶ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ದಾರಿ ತೋರಿಸುವಂತಹ ಮಾದರಿಯಾಗಿದೆ. ಕೆಳ ಹಂತದಲ್ಲಿರುವ ಆಸ್ಪತ್ರೆಗಳನ್ನು ಬಲಗೊಳಿಸುವ ಮೂಲಕ ಹಾಗೂ ವಿವಿಧ ವಿಭಾಗಗಳಲ್ಲಿ ಹೊಂದಾಣಿಕೆಯನ್ನು ಸಾಧ್ಯವಾಗಿಸುವ ಮೂಲಕ, ಕೋವಿಡ್‌ನಂತಹ ಪ್ರಮುಖ ಉಪದ್ರವದ ದೊಡ್ಡ ಸವಾಲನ್ನು ನಿಯಂತ್ರಿಸುವಲ್ಲಿ ಕೇರಳ ರಾಜ್ಯ ಸಫಲವಾಗಿದೆ. ಇಂತಹ ಮಾದರಿಯ ಅನುಸರಣೆಯು ಆರೋಗ್ಯಕರ ಭಾರತವನ್ನು ನಮ್ಮೆದುರು ಅನಾವರಣಗೊಳಿಸಬಲ್ಲುದು.