ಕೊಚ್ಚಿ( ಕೇರಳ): 30 ಕೆ.ಜಿ. ಚಿನ್ನ ಕಳ್ಳಸಾಗಣೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲದ (ಇಡಿ) ವಶಕ್ಕೆ ಒಪ್ಪಿಸಲಾಗಿದೆ.
ಕಳೆದ ತಿಂಗಳು ರಾಜತಾಂತ್ರಿಕ ರಕ್ಷಣೆ ಹೊಂದಿರುವ ಡಿಪ್ಲೊಮ್ಯಾಟಿಕ್ ಬ್ಯಾಗೇಜ್ ನಲ್ಲಿದ್ದ 14.82 ಕೋಟಿ ರೂ. ಮೌಲ್ಯದ 30 ಕೆ.ಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು.
ಈ ಸಂಬಂಧ ಆರೋಪಿಗಳಾದ ಸರಿತ್ ಪಿಎಸ್, ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನು ಬಂಧಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಮುಂದುವರೆಸಿದೆ. ಆದರೆ, ಆರೋಪಿಗಳಿಂದ ಹೆಚ್ವಿನ ವಿವರಗಳು ಮತ್ತು ಮಾಹಿತಿಗಳನ್ನು ಪಡೆದುಕೊಳ್ಳಲು 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿತ್ತು.
ಇಡಿ ಅಧಿಕಾರಿಗಳ ಮನವಿಯನ್ನ ಮನ್ನಿಸಿರುವ ಎರ್ನಾಕುಲಂನ ಪ್ರಧಾನ ಸೆಷನ್ಸ್ ನ್ಯಾಯಾಲಯ ಇಂದು ಸರಿತ್ ಪಿ.ಎಸ್, ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನು ಏಳು ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದೆ.