ತಿರುವನಂತಪುರ: ಕೇರಳದಲ್ಲಿ ಮತ್ತೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣದಿಂದ ಅಲ್ಲಿನ ಸರ್ಕಾರ ತಿರುವನಂತಪುರ ನಗರದಲ್ಲಿ ತ್ರಿವಳಿ ಲಾಕ್ಡೌನ್ ಹೇರಲು ಮುಂದಾಗಿದೆ. ಜುಲೈ 6ರ ಬೆಳಗ್ಗೆ 6 ಗಂಟೆಯಿಂದ ಈ ಲಾಕ್ಡೌನ್ ಘೋಷಿಸಲಾಗಿದ್ದು, ಒಂದು ವಾರದ ಮಟ್ಟಿಗೆ ಈ ಲಾಕ್ಡೌನ್ ಇರಲಿದೆ.
ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ '' ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದ ಒಂದು ವಾರದ ಮಟ್ಟಿಗೆ ಕಾಲ ಲಾಕ್ಡೌನ್ ಮಾಡಲಾಗುತ್ತದೆ'' ಎಂದಿರುವ ಅವರು ಜಿಲ್ಲೆ ಜ್ವಾಲಾಮುಖಿಯ ಮೇಲಿದೆ ಎಂದು ಆತಂಕ ವ್ಯಕ್ತಪಡಿಸಿ ''ಲಾಕ್ಡೌನ್ ವೇಳೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿರುತ್ತದೆ'' ಎಂದಿದ್ದಾರೆ. ಈ ಮೂಲಕ ತಿರುವನಂತಪುರಂ ಮತ್ತೊಮ್ಮೆ ಲಾಕ್ಡೌನ್ ಸಂಕಷ್ಟ ಎದುರಿಸಬೇಕಾಗಿದೆ.
ಏನಿದು ತ್ರಿವಳಿ ಲಾಕ್ಡೌನ್..?
ಕೊರೊನಾ ವೈರಸ್ ಹರಡದಂತೆ ತಡೆಯಲು ವಿಭಿನ್ನ ತಂತ್ರಗಳೊಂದಿಗೆ ಈ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಮೂರು ರೀತಿಯ ಹಂತಗಳನ್ನು ಹೊಂದಿರುತ್ತದೆ.
1.ಮೊದಲನೇ ಹಂತದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿರುವ ಜಿಲ್ಲೆಯನ್ನು ಯಾರೂ ಕೂಡಾ ಪ್ರವೇಶಿಸದಂತೆ ನೋಡಿಕೊಳ್ಳುವುದು ಹಾಗೂ ಆ ಜಿಲ್ಲೆಯಿಂದ ಯಾರೂ ಹೊರಹೋಗದಂತೆ ನಿರ್ಬಂಧಿಸುವುದು
2.ಎರಡನೇ ಹಂತದಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿರುವ ಪ್ರದೇಶಗಳನ್ನು ಕ್ಲಸ್ಟರ್ಗಳಾಗಿ ವಿಂಗಡಿಸುವುದು ಹಾಗೂ ಅಲ್ಲಿ ಸೋಂಕಿತರೊಂದಿಗೆ ಬೇರೆ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ತಡೆಯುವುದು
3.ಮೂರನೇ ಹಂತದಲ್ಲಿ ಸೋಂಕಿತರ ಮನೆಗಳನ್ನು ಸೀಲ್ ಮಾಡುವುದು ಹಾಗೂ ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಅವರ ಮನೆಗಳಲ್ಲೇ ಇರುವಂತೆ ನೋಡಿಕೊಳ್ಳುವುದು.
ಈ ಮೂರು ಹಂತಗಳ ಮೂಲಕ ಕೊರೊನಾ ಸೋಂಕನ್ನು ನಿಯಂತ್ರಿಸಲು ತಿರುವನಂತಪುರ ಜಿಲ್ಲಾಡಳಿತ ಮುಂದಾಗಿದೆ.
ಸದ್ಯ ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,429 ಇದ್ದು, ಈವರೆಗೆ 25 ಮಂದಿ ಮೃತಪಟ್ಟಿದ್ದಾರೆ. 3,174 ಮಂದಿ ಚೇತರಿಸಿಕೊಂಡಿದ್ದು, 2,230 ಮಂದಿ ಸೋಂಕಿತರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.