ಕೊಚ್ಚಿ (ಕೇರಳ): ಅಬುಧಾಬಿಯಿಂದ ಭಾರತಕ್ಕೆ ಕರೆದುಕೊಂಡು ಬಂದ 181 ವ್ಯಕ್ತಿಗಳ ಪೈಕಿ ಐದು ಜನರಲ್ಲಿ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆ ಜಿಲ್ಲಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ಕಳುಹಿಸಲಾಗಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಬುಧಾಬಿಯಿಂದ 181 ವ್ಯಕ್ತಿಗಳನ್ನು ಹೊತ್ತು ನಿನ್ನೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಇವರಲ್ಲಿ 49 ಗರ್ಭಿಣಿಯರು ಮತ್ತು ನಾಲ್ವರು ಮಕ್ಕಳು ಕೂಡ ಇದ್ದರು. ಇನ್ನು ಕೊರೊನಾ ಲಕ್ಷಣ ಕಂಡುಬಂದ ಐವರನ್ನು ಹೊರತುಪಡಿಸಿ ಇನ್ನುಳಿದವರನ್ನು ಆಯಾ ಜಿಲ್ಲೆಗಳ ಸಂಬಂಧಿಸಿದ ಅಧಿಕಾರಿಗಳು ಕ್ವಾರಂಟೈನ್ಗೆ ಕರೆದುಕೊಂಡು ಹೋದರು. ಇನ್ನು ಸರ್ಕಾರ ಕೂಡ ಇವರೆಲ್ಲರನ್ನು 14 ದಿನಗಳ ವರೆಗೆ ಕ್ವಾರಂಟೈನ್ನಲ್ಲಿ ಇಡಲು ಕಡ್ಡಾಯ ನಿರ್ದೇಶನ ನೀಡಿದೆ.
ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ನಾಗರಿಕರನ್ನು ಭಾರತ ಸರ್ಕಾರ ಕರೆತರುವ ಕೆಲಸ ಮಾಡುತ್ತಿದೆ. ವಿದೇಶದಲ್ಲಿ ಸಿಲುಕಿರುವ ಸುಮಾರು 15 ಸಾವಿರ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಏರ್ ಇಂಡಿಯಾ ಮೇ 7 ರಿಂದ ಮೇ 13 ರವರೆಗೆ 64 ವಿಮಾನಗಳನ್ನು ಹಾರಿಸಲಿದೆ ಎಂದು ಸರ್ಕಾರ ಹೇಳಿದೆ.
ಮೇ 7 ರಿಂದ ಯುಎಇ, ಸೌದಿ ಅರೇಬಿಯಾ, ಕುವೈತ್, ಕತಾರ್, ಬಹ್ರೇನ್, ಮಾಲ್ಡೀವ್ಸ್, ಸಿಂಗಾಪುರ್ ಮತ್ತು ಯುಎಸ್ ಸೇರಿದಂತೆ 12 ದೇಶಗಳಿಗೆ 64 ವಿಮಾನಗಳು ಹಾರಾಟ ನಡೆಸಲಿವೆ.