ನವದೆಹಲಿ: ಕೃಷಿಗೆ ಸಂಬಂಧಿಸಿದಂತೆ ಸಂಸತ್ನಲ್ಲಿ ಮಂಡನೆಯಾಗಿರುವ ಮೂರು ಮಸೂದೆಗಳು 'ರೈತ ವಿರೋಧಿ'ಯಾಗಿದ್ದು, ಈ ಮಸೂದೆಗಳ ವಿರುದ್ಧ ಆಮ್ ಆದ್ಮಿ ಪಕ್ಷ ( ಎಎಪಿ) ಮತ ಚಲಾಯಿಸಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರದ ಕೃಷಿಗೆ ಸಂಬಂಧಿತ ಮೂರು ಮಸೂದೆಗಳು ರೈತ ವಿರೋಧಿಯಾಗಿವೆ. ದೇಶದಾದ್ಯಂತ ರೈತರು ಅದನ್ನು ವಿರೋಧಿಸಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಮಸೂದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿ ಮೂವರು ರಾಜ್ಯಸಭಾ ಮತ್ತು ಒಬ್ಬ ಲೋಕಸಭಾ ಸದಸ್ಯರಿದ್ದಾರೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, ರೈತರಿಗೆ ( ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು ಸೋಮವಾರ ಸಂಸತ್ನಲ್ಲಿ ಕೇಂದ್ರ ಸರ್ಕಾರ ಮಂಡಿಸಿದೆ.
ಈ ಮಸೂದೆಗಳು, ಕೃಷಿ ಮಂಡಿಗಳ ಹೊರಗೆ ರೈತರ ಉತ್ಪನ್ನಗಳಿಗೆ ತಡೆ ನೀಡಿ, ಮುಕ್ತ ವ್ಯಾಪಾರವನ್ನು ಒದಗಿಸಲು ಪ್ರಯತ್ನಿಸುತ್ತವೆ ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಖಾಸಗಿಯವರೊಂದಿಗೆ ಕೃಷಿ ಒಪ್ಪಂದಗಳನ್ನು ಮಾಡಿಕೊಳ್ಳಲು ರೈತರಿಗೆ ಅಧಿಕಾರ ನೀಡುತ್ತವೆ.