ನಿಜವಾದ ಒಕ್ಕೂಟ ವ್ಯವಸ್ಥೆಯಲ್ಲಿ, ರಾಜ್ಯಗಳ ಅಸ್ತಿತ್ವ ಕೇಂದ್ರ ಸರ್ಕಾರದ ಕೃಪೆ ಅವಲಂಬಿಸಿಕೊಂಡು ಇರುವುದಿಲ್ಲ. ರಾಜ್ಯದ ಗಡಿಗಳನ್ನು ರೂಪಿಸುವಾಗ ಅಥವಾ ವಿಲೀನಗೊಳಿಸುವಾಗ ಮಾತ್ರ, ಸಂಬಂಧಪಟ್ಟ ರಾಜ್ಯದ ಒಪ್ಪಿಗೆ ಇಲ್ಲದೆ ಕಾರ್ಯರೂಪಕ್ಕೆ ಬರುವುದಿಲ್ಲ. ಆದರೆ ನಮ್ಮ ಸಂವಿಧಾನದಲ್ಲಿ, 2 ಮತ್ತು 3 ನೇ ವಿಧಿಯ ಮೂಲಕ, ಹೊಸ ರಾಜ್ಯಗಳನ್ನು ರಚಿಸಲು, ಅದರ ಹೆಸರು ಬದಲಿಸಲು ಮತ್ತು ಗಡಿಗಳನ್ನು ಮಾರ್ಪಡಿಸಲು ಸಂಸತ್ತಿಗೆ ಅಧಿಕಾರ ಇದೆ.
ಇತ್ತೀಚಿನ ದಿನಗಳಲ್ಲಿ, ಒಂದೆರಡು ಸಂದರ್ಭ ಹೊರತುಪಡಿಸಿದರೆ, ಆಯಾ ರಾಜ್ಯಗಳ ಒಪ್ಪಿಗೆ ಮತ್ತು ದೇಶದ ಸಮ್ಮತಿ ಮೂಲಕ ಹೊಸ ರಾಜ್ಯಗಳ ರಚನೆ ಆಗಿದೆ. ಅಂತೆಯೇ, ಜನರ ಆಶಯದ ಪ್ರಕಾರ ಭಾಷಾ ರಾಜ್ಯಗಳನ್ನು ಶಾಂತಿಯುತವಾಗಿ ರಚಿಸಲಾಗಿದೆ. ಅದಕ್ಕಾಗಿಯೇ, ವಿಶ್ವದ ಯಾವುದೇ ದೇಶಕ್ಕಿಂತ ಭಿನ್ನವಾಗಿ, ಸಂವಿಧಾನದಿಂದ ಮಾನ್ಯತೆ ಪಡೆದ 22 ವೈವಿಧ್ಯಮಯ ಭಾಷೆಗಳ ಹೊರತಾಗಿಯೂ ನಾವು ದೃಢತೆ ಮತ್ತು ಸಹಕಾರ ಸಾಧಿಸಲು ಸಮರ್ಥರು ಎನಿಸಿಕೊಂಡಿದ್ದೇವೆ.
ಅಖಿಲ ಭಾರತ ಸೇವೆಗಳು ಒಕ್ಕೂಟ ಮನೋಭಾವಕ್ಕೆ ವ್ಯತಿರಿಕ್ತ ಆಗಿದ್ದರೂ, ನಾವು ಅವುಗಳನ್ನು ದೇಶದ ಹಿತದೃಷ್ಟಿಯಿಂದ ಮುಂದುವರಿಸಿಕೊಂಡು ಬಂದಿದ್ದೇವೆ. ವಿಶ್ವದ ಇತರ ಸಂವಿಧಾನಗಳಿಗಿಂತ ಭಿನ್ನವಾಗಿ, ನಮ್ಮ ಸಂವಿಧಾನದಲ್ಲಿ ರಾಜ್ಯಗಳು ರಾಜಕೀಯ ಮಾದರಿ ರೂಪಿಸಿಕೊಳ್ಳುವುದಕ್ಕೆ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಆಡಳಿತಕ್ಕೆ ಸರ್ಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯಗಳಿಗೆ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ನೇಮಕ ಮಾಡುತ್ತಿದ್ದು ಅವರು ಜನರಿಂದ ನೇರವಾಗಿ ಚುನಾಯಿತರಾಗದ ಕಾರಣ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ತೋರುತ್ತದೆ. ಇದಲ್ಲದೆ, ಪ್ರಜಾಸತ್ತಾತ್ಮಕವಾಗಿ ಗದ್ದುಗೆ ಏರಿದ ಸರ್ಕಾರ ಮತ್ತು ಶಾಸಕಾಂಗ ಸಂಸ್ಥೆಗಳನ್ನು ವಿಸರ್ಜಿಸಲು ಕೇಂದ್ರಕ್ಕೆ 356 ನೇ ವಿಧಿ ಮೂಲಕ ಅಧಿಕಾರ ನೀಡುವುದು ವಸಾಹತುಶಾಹಿ ಆಡಳಿತದ ಕುರುಹು ಎನಿಸಿದ್ದು ಒಕ್ಕೂಟ ಪರಿಕಲ್ಪನೆಗೆ ವಿರುದ್ಧ ಆಗಿದೆ.
ರಾಜ್ಯಗಳಿಗೆ ಹೆಚ್ಚಿನ ಅಧಿಕಾರ...
7ನೇ ಪರಿಚ್ಛೇದದ ಪ್ರಕಾರ ನಡೆದಿರುವ ಅಧಿಕಾರ ಹಂಚಿಕೆಯಂತೆ, ಹೆಚ್ಚಿನ ಅಧಿಕಾರಗಳು ಕೇಂದ್ರ ಸರ್ಕಾರಕ್ಕೆ ದೊರೆತಿವೆ. ಇದಲ್ಲದೆ, ಸಮವರ್ತಿ ಪಟ್ಟಿಯ ಹೆಸರಿನಲ್ಲಿ, ರಾಜ್ಯಗಳಿಂದ ನಿರ್ವಹಿಸಲಾಗದ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆ. ಜೊತೆಗೆ, ಕೆಲ ‘ರಾಜ್ಯ ವಿಷಯ’ಗಳನ್ನು ಕೇಂದ್ರಕ್ಕೆ ವರ್ಗಾಯಿಸಲು ರಾಜ್ಯಸಭೆಗೆ ಅಧಿಕಾರ ನೀಡಲಾಗಿದೆ. ತುರ್ತು ಪರಿಸ್ಥಿತಿ ಘೋಷಿಸಿದರೆ, ಎಲ್ಲಾ ವಿಷಯಗಳ ಬಗ್ಗೆ ಕಾಯ್ದೆ ಮಾಡುವ ಅಧಿಕಾರ ಸಂಸತ್ತಿಗೆ ಇರುತ್ತದೆ. ಅಂತಹ ಸಂದರ್ಭದಲ್ಲಿ, ನಮ್ಮ ದೇಶವು ಒಕ್ಕೂಟ ವ್ಯವಸ್ಥೆ ಬದಲು ಏಕೀಕೃತ ವ್ಯವಸ್ಥೆ ಆಗಲಿದೆ.
ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಎರಡು ಅಥವಾ ಹೆಚ್ಚಿನ ರಾಜ್ಯಗಳು ಬಯಸಿದರೆ ಸಂಸತ್ತು ಕ್ರಮ ಕೈಗೊಳ್ಳಬಹುದು. ಒಮ್ಮೆ ಒಂದು ರಾಜ್ಯ ಅಂತಹ ಕಾಯ್ದೆ ಜಾರಿಗೆ ತರಲು ಒಪ್ಪಿದರೆ, ಭವಿಷ್ಯದಲ್ಲಿ ಆ ವಿಷಯದ ಬಗ್ಗೆ ಮಾತನಾಡಲು ಅಥವಾ ಅಧಿಕಾರ ಚಲಾಯಿಸಲು ಅದಕ್ಕೆ ಸಾಧ್ಯ ಇರದು. ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಕಾಯ್ದೆ ಮಾಡಲು ಸಂಸತ್ತಿಗೆ ಅಧಿಕಾರ ಇದೆ. ಈ ರೀತಿಯಾಗಿ, ರಾಜ್ಯಗಳಿಗೆ ಸ್ವಾಯತ್ತತೆ ನೀಡುವ ಬದಲು ವಿವಿಧ ರೂಪಗಳಲ್ಲಿ ಕಾಯ್ದೆ ಮಾಡುವ ಅಧಿಕಾರವನ್ನು ಸಂಸತ್ತಿಗೆ ಸಂವಿಧಾನ ನೀಡಿದೆ. ಇದು ಅಪರಿಮಿತ ಅಧಿಕಾರ ಕೇಂದ್ರೀಕರಣಕ್ಕೆ ಕಾರಣ ಆಗುತ್ತದೆ.
ಭಾರತ ಗಣರಾಜ್ಯ ರಚನೆ ನಂತರ, ರಾಜ್ಯಗಳಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಸಮವರ್ತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಆ ಮೂಲಕ ಸಂಸತ್ತಿಗೆ ಮತ್ತು ಕೇಂದ್ರಕ್ಕೆ ಅಧಿಕಾರ ನೀಡಲಾಗಿದೆ. ಇದರೊಂದಿಗೆ, ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಪರಿಸ್ಥಿತಿಗಳಿಗೆ ಯಾವುದೇ ಸಂಬಂಧ ಇಲ್ಲದಿದ್ದರೂ, ಕಾಯಿದೆ ಏಕರೂಪವಾಗಿ ಒಂದೇ ಚೌಕಟ್ಟಿನಲ್ಲಿ ರೂಪುಗೊಳ್ಳುತ್ತದೆ.
ಇಂತಹ ಕೃತ್ಯಗಳು ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಅಡ್ಡಿ ಆಗಿವೆ. ನ್ಯಾಯಾಲಯಗಳನ್ನು ಸ್ಥಾಪಿಸುವುದು, ಮತ್ತು ಅಸ್ತಿತ್ವದಲ್ಲಿರುವ ಕೆಳಮಟ್ಟದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಅಥವಾ ತ್ವರಿತ ನ್ಯಾಯ ಒದಗಿಸುವುದು ಮುಂತಾದ ವಿಷಯಗಳಲ್ಲಿ ಕೇಂದ್ರದ ಅನುಮತಿ ಅಗತ್ಯ. ಶಾಲಾ ಶಿಕ್ಷಣವನ್ನು ಸಮವರ್ತಿ ಪಟ್ಟಿಯಲ್ಲಿ ಸೇರಿಸುವ ಮೂಲಕ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಅವಕಾಶ ತಪ್ಪಿ ಹೋಗಿದೆ.
ಸಂಸತ್ತು ‘ಶಿಕ್ಷಣದ ಹಕ್ಕನ್ನು’ ಕಾನೂನು ಮಾಡಿದೆ. ಸಾವಿರಾರು ಕೋಟಿ ರೂಪಾಯಿಗಳನ್ನು ಯೋಜನೆಯಡಿ ಖರ್ಚು ಮಾಡಲಾಗಿದ್ದರೂ, ತೆಲುಗು ರಾಜ್ಯಗಳು ಸೇರಿದಂತೆ ಹಲವೆಡೆ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ. ಭೂಮಿಗೆ ಸಂಬಂಧಿಸಿದ ಎಲ್ಲಾ ವಿಷಯಗಳು ರಾಜ್ಯ ವ್ಯಾಪ್ತಿಯಲ್ಲಿದ್ದರೂ, ಭೂಸ್ವಾಧೀನತೆ ಸಮವರ್ತಿ ಪಟ್ಟಿಯಲ್ಲಿ ಸೇರ್ಪಡೆ ಆಗಿದೆ. ಇದರ ಪರಿಣಾಮವಾಗಿ, ಯೋಜನೆಗಳ ಖರ್ಚು ವಿಪರೀತ ಹೆಚ್ಚಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ ನೆಪದಲ್ಲಿ, ಹಾಲು ನೀಡುವ ಪ್ರಾಣಿಗಳ ವ್ಯಾಪಾರವನ್ನು ಸಂಪೂರ್ಣವಾಗಿ ಕೇಂದ್ರದ ನಿಯಂತ್ರಣದಲ್ಲಿ ಇರಿಸಲಾಗಿದೆ. ಇದರಿಂದಾಗಿ, ಈ ನಿಯಮಗಳು ರಾಜ್ಯಗಳ ಗ್ರಾಮೀಣ ಆರ್ಥಿಕತೆಯನ್ನು ತೀವ್ರವಾಗಿ ಕುಂಠಿತಗೊಳಿಸುತ್ತಿವೆ.
ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಅಧಿಕಾರ ಇದ್ದರೂ, ದಿನನಿತ್ಯದ ಮೂಲಸೌಕರ್ಯ ಒದಗಿಸುವುದು, ಅತ್ಯಗತ್ಯ ಸೌಲಭ್ಯಗಳನ್ನು ವಿಸ್ತರಿಸುವುದು, ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಒದಗಿಸುವುದು ರಾಜ್ಯಗಳ ಜವಾಬ್ದಾರಿ ಆಗಿದೆ. ಇದರರ್ಥ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ತ್ವರಿತ ನ್ಯಾಯ ಒದಗಿಸುವುದು ರಾಜ್ಯಗಳ ಹೊಣೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹೆಚ್ಚಿನ ಅಧಿಕಾರ ಕೇಂದ್ರಕ್ಕೆ ವಹಿಸಲಾಗಿದ್ದರೂ ಅದಕ್ಕೆ ಜವಾಬ್ದಾರಿಗಳು ಕಡಿಮೆ. ಆದರೆ ಸಂಪನ್ಮೂಲದ ಸಿಂಹಪಾಲು ಕೇಂದ್ರಕ್ಕೆ ಹೋಗುತ್ತದೆ.
ಸಂಪನ್ಮೂಲ ಸಮಸ್ಯೆಯ ಜೊತೆಗೆ, ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳನ್ನು ಸಮವರ್ತಿ ಪಟ್ಟಿಯಲ್ಲಿ ಸೇರಿಸಲಾಗಿದ್ದು ಇದರಿಂದಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರಕ್ಕೆ ನೀಡಿದಂತಾಗಿದೆ. ಕೇಂದ್ರ ಕೈಗೊಳ್ಳುವ ನಿರ್ಣಯಕ್ಕಾಗಿ ರಾಜ್ಯಗಳು ತಾಳ್ಮೆಯಿಂದ ಮತ್ತು ಅಸಹಾಯಕತೆಯಿಂದ ಕಾಯಬೇಕು ಮತ್ತು ಅದಕ್ಕಾಗಿ ಸಾಕಷ್ಟು ಸುತ್ತು ಹಾಕಬೇಕು. ಯೋಜನಾ ಆಯೋಗ ರದ್ದುಪಡಿಸುವುದರೊಂದಿಗೆ ಪರಿಸ್ಥಿತಿ ಸ್ವಲ್ಪ ಬದಲಾಗಿದ್ದರೂ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಾಬಲ್ಯ ಮತ್ತು ಕೇಂದ್ರೀಕರಣ ಕೇಂದ್ರ ಸರ್ಕಾರದ ಜೊತೆಗೇ ಮುಂದುವರಿದಿದೆ.
ಕೇಂದ್ರ-ಪ್ರಾಯೋಜಿತ ಹಲವು ಯೋಜನೆಗಳನ್ನು ರಾಜ್ಯಗಳ ಮೇಲೆ ಹೇರಲಾಗುತ್ತದೆ. ಕೇಂದ್ರದ ನಿರ್ದೇಶನದಂತೆ ಅವುಗಳನ್ನು ಕಾರ್ಯಗತಗೊಳಿಸಿದರೆ ಮಾತ್ರ ರಾಜ್ಯಗಳು ಹಣ ಪಡೆಯಬಹುದು. ಹೀಗಾಗಿ, ಸಂವಿಧಾನದಲ್ಲಿ ಅಂತಹ ಒಂದು ಮಾದರಿ ರಚನೆಯಿಂದಾಗಿ, ರಾಜ್ಯಗಳ ಅಧಿಕಾರವನ್ನು ನಿರ್ಬಂಧಿಸುವ ತಿದ್ದುಪಡಿಗಳ ಕಾರಣದಿಂದಾಗಿ, ಆರ್ಥಿಕ ಕೇಂದ್ರೀಕರಣದ ಕಾರಣದಿಂದಾಗಿ, ಮತ್ತು ಅಂತಿಮವಾಗಿ ಕೇಂದ್ರ-ಪ್ರಾಯೋಜಿತ ಯೋಜನೆಗಳ ನೆಪದಿಂದಾಗಿ, ಅಧಿಕಾರ ಕೇಂದ್ರೀಕರಣ ದೇಶದ ಒಕ್ಕೂಟ ವ್ಯವಸ್ಥೆ ಮೇಲೆ ಹೆಚ್ಚು ಪರಿಣಾಮ ಬೀರಿದೆ.
ಕೆಲ ಭರವಸೆಯ ಸಂಕೇತಗಳು . . .
ಎರಡು ಮುಖ್ಯ ಕಾರಣಗಳಿಂದಾಗಿ ಒಕ್ಕೂಟ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಬಲಗೊಂಡಿದೆ ಎಂಬುದು ನಿಜ,. ಮೊದಲನೆಯದಾಗಿ, ಆಯಾ ರಾಜ್ಯಗಳ ಒಪ್ಪಿಗೆ ಪಡೆದು ಭಾಷೆ ಆಧಾರಿತ ರಾಜ್ಯಗಳ ವಿಭಜನೆ ಮಾಡಲಾಗುತ್ತದೆ. ಇದು ಆರೋಗ್ಯಕರ ಸಂಗತಿ. ಎರಡನೆಯದಾಗಿ, ಆರಂಭದಿಂದಲೂ, ಕೇಂದ್ರ - ರಾಜ್ಯ ಸಂಬಂಧಗಳನ್ನು ಪರೀಕ್ಷಿಸಲು ರಾಷ್ಟ್ರ ಮಟ್ಟದಲ್ಲಿ ಹಣಕಾಸು ಆಯೋಗಗಳನ್ನು ರಚನೆ ಮಾಡಲಾಯಿತು ಮತ್ತು ಈ ಆಯೋಗಗಳ ಶಿಫಾರಸುಗಳನ್ನು ಶ್ರದ್ಧೆಯಿಂದ ಜಾರಿಗೆ ತರಲಾಯಿತು. ಇದರೊಂದಿಗೆ, ಹಣಕಾಸಿನ ವಹಿವಾಟುಗಳನ್ನು ತರ್ಕಬದ್ಧ ಮಾಡಲಾಯಿತು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲಾಯಿತು.
1991 ರ ನಂತರ ನಡೆದ ಕೆಲವು ಘಟನೆಗಳು ಸಹ ಒಕ್ಕೂಟ ವ್ಯವಸ್ಥೆ ಬಲಪಡಿಸಲು ಕಾರಣ ಆಗಿವೆ. ಕಾಂಗ್ರೆಸ್ ಪ್ರಾಬಲ್ಯ ಕ್ಷೀಣಿಸಿದ ನಂತರ ಮತ್ತು ಪ್ರಾದೇಶಿಕ ಪಕ್ಷಗಳು ರಾಜ್ಯಗಳಲ್ಲಿ ಬಲ ಪಡೆದ ನಂತರ, ರಾಷ್ಟ್ರದ ಚುಕ್ಕಾಣಿ ಹಿಡಿದ ಪಕ್ಷಗಳು ರಾಜ್ಯಗಳ ಅಭಿವೃದ್ಧಿ ಮತ್ತು ಅವುಗಳ ಹಕ್ಕುಗಳನ್ನು ಗಣನೆಗೆ ತೆಗೆದುಕೊಳ್ಳುವುದು ಅನಿವಾರ್ಯ ಆಯಿತು. 1994 ರ ಬೊಮ್ಮಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬಳಿಕ, ಚುನಾಯಿತ ಸರ್ಕಾರಗಳನ್ನು ವಿಸರ್ಜಿಸಲು 365 ನೇ ವಿಧಿಯ ದುರುಪಯೋಗ ಬಹುತೇಕ ನಿಂತುಹೋಗಿದೆ.
1991 ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದ್ದರಿಂದ ಸರ್ಕಾರ ಆರ್ಥಿಕ ಸುಧಾರಣೆಗಳನ್ನು ತೆಗೆದುಕೊಳ್ಳಬೇಕಾಯಿತು. ಆ ಸುಧಾರಣೆಗಳ ಭಾಗವಾಗಿ, ‘ ಲೈಸೆನ್ಸ್ - ಪರ್ಮಿಟ್ - ಕೋಟಾ ರಾಜ್ ’ ಬಹುತೇಕ ಅಂತ್ಯ ಕಂಡಿದೆ. ಅದರೊಂದಿಗೆ, ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೋದ್ಯಮಿಗಳು ದೆಹಲಿಗೆ ಸುತ್ತು ಹಾಕುತ್ತ ಕಿರಿಕಿರಿ ಅನುಭವಿಸುವುದು ತಪ್ಪಿದೆ. ರಾಜ್ಯಗಳು ತಮ್ಮ ನೀತಿ ಜಾರಿಗೆ ತಂದು ಮತ್ತು ಹೂಡಿಕೆ ಮಾಡಿ ಪ್ರಗತಿಗೆ ದಾರಿ ಮಾಡಿಕೊಡಲು ಸಾಧ್ಯ ಆಗಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ, ಸರ್ಕಾರಿ ಸಂಸ್ಥೆಗಳ ಪಾತ್ರ ಕಡಿಮೆಯಾಗಿದ್ದು ಮುಕ್ತ ವ್ಯಾಪಾರ ಮತ್ತು ಸ್ಪರ್ಧೆ ಹೆಚ್ಚಾಗಿದೆ. ಇತ್ತೀಚೆಗೆ ಯೋಜನಾ ಆಯೋಗ ರದ್ದು ಮಾಡಿದ ಪರಿಣಾಮ ಆರ್ಥಿಕ ನಿರ್ಧಾರಗಳಲ್ಲಿ ಅಧಿಕಾರ ಕೇಂದ್ರೀಕರಣ ಕಡಿಮೆ ಮಾಡಿದೆ. ಇವೆಲ್ಲವೂ ಒಕ್ಕೂಟ ವ್ಯವಸ್ಥೆಗೆ ಉತ್ತಮ ಸೂಚನೆಗಳು.
365 ನೇ ವಿಧಿ ದುರುಪಯೋಗ ಮಾಡಲು ಸಾಧ್ಯ ಇಲ್ಲ ಎಂದು ಎಲ್ಲರೂ ಭಾವಿಸತೊಡಗಿದಂತೆ, ಅರುಣಾಚಲ ಪ್ರದೇಶ, ಉತ್ತರಾಖಂಡ, ಮತ್ತು ಇತ್ತೀಚೆಗೆ ಮಹಾರಾಷ್ಟ್ರ, ಜಮ್ಮು ಕಾಶ್ಮೀರದಲ್ಲಿ ನಡೆದ ಬೆಳವಣಿಗೆಗಳು ಹಾಗೂ ಆ ರಾಜ್ಯಗಳ ವಿರುದ್ಧ ಕೈಗೊಂಡ ಕ್ರಮಗಳು ಕೇಂದ್ರೀಕರಣ ಹೆಚ್ಚುತ್ತಿರುವುದಕ್ಕೆ ಮತ್ತು ಒಕ್ಕೂಟ ವ್ಯವಸ್ಥೆ ಭಗ್ನಗೊಳ್ಳುತ್ತಿರುವುದಕ್ಕೆ ಸೂಚನೆಗಳು. ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ಜಾರಿ ಮಾಡಲಾದ ನೋಟು ಅಮಾನ್ಯೀಕರಣ ಯೋಜನೆ ರಾಜ್ಯಗಳ ಆರ್ಥಿಕ ವ್ಯವಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
15 ನೇ ಹಣಕಾಸು ಆಯೋಗಕ್ಕೆ ನೀಡಲಾದ ಕೆಲ ಮಾರ್ಗಸೂಚಿಗಳು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ದಿಕ್ಕಿನಲ್ಲಿ ಸಾಗಿವೆ. ಕೇಂದ್ರ ಸರ್ಕಾರ ತನ್ನ ರಾಜಕೀಯ ಉದ್ದೇಶ ಪೂರೈಸಿಕೊಳ್ಳಲು ನರ -ಕೇಂದ್ರ ಇಲಾಖೆಗಳು ಎನಿಸಿಕೊಂಡಿರುವ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಕಂದಾಯ ಗುಪ್ತಚರ ದಳಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಹೆಚ್ಚುತ್ತಿದೆ. ಇವೆಲ್ಲವೂ ನಿಸ್ಸಂದೇಹವಾಗಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲ ಮಾಡುವ ನಡೆಗಳೇ ಆಗಿವೆ. 70 ವರ್ಷಗಳ ಹಳೆಯ ಸಂವಿಧಾನದ ಅನುಷ್ಠಾನದ ಹಿನ್ನೆಲೆಯಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಚರ್ಚೆಯ ಅವಶ್ಯಕತೆ ಇದೆ.
ದೇಶದ ಏಕೀಕರಣ, ಅಧಿಕಾರದ ವಿಕೇಂದ್ರೀಕರಣ, ಸ್ಥಳೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾಯತ್ತತೆ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ವಿಕಸನ - ಇವುಗಳ ಸಮನ್ವಯವು ದೇಶದ ಭವಿಷ್ಯಕ್ಕೆ ಅವಶ್ಯಕ ಆಗಿದೆ. ಚೀನಾದಂತಹ ಸರ್ವಾಧಿಕಾರಿ ದೇಶದಲ್ಲಿ ವಿಕೇಂದ್ರೀಕರಣವನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. 40 ವರ್ಷಗಳಲ್ಲಿ ಚೀನಾ ಸಾಧಿಸಿದ ಪ್ರಗತಿಯ ಅಡಿಪಾಯ ಎಂದರೆ ಅಧಿಕಾರದ ವಿಕೇಂದ್ರೀಕರಣ, ಸ್ಥಳೀಯ ಸರ್ಕಾರಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೋರುವ ನವಿರುತನ. ಪ್ರಜಾಪ್ರಭುತ್ವ ಭಾರತ ಇವುಗಳಿಂದ ಪಾಠ ಕಲಿಯಬೇಕು. ದೇಶದ ಭವಿಷ್ಯ ಮತ್ತು ಆರ್ಥಿಕ ಪ್ರಗತಿಗೆ ಉತ್ತರದಾಯಿತ್ವ ಹೆಚ್ಚಿಸುವುದು, ವಿಕೇಂದ್ರೀಕರಣ ಕೈಗೊಳ್ಳುವುದು ಮತ್ತು ಆಡಳಿತಾತ್ಮಕ ದಕ್ಷತೆ ಹೆಚ್ಚಿಸುವುದು ಬಹಳ ಅವಶ್ಯಕ ಎನಿಸಿದೆ.
ಲೇಖಕ: ಎಫ್‌ಡಿಆರ್, ಲೋಕಸತ್ತಾ ಸ್ಥಾಪಕ