ಹೈದರಾಬಾದ್: ಅಂತಿಮವಾಗಿ ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆ ನೌಕರರ ಹೋರಾಟಕ್ಕೆ ಜಯ ಸಿಕ್ಕಿದೆ. ಸಿಎಂ ನೌಕರರೊಂದಿಗೆ ಮಾತನಾಡಿದ್ದು,ಅಂತಿಮವಾಗಿ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಕೆ.ಚಂದ್ರಶೇಖರ್ ರಾವ್, ನೌಕರರು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಿದ್ದಾರೆ.
ಇಂದಿನಿಂದಲೇ ಎಲ್ಲ ಪ್ರತಿಭಟನಾ ನಿರತ ಸಾರಿಗೆ ಸಂಸ್ಥೆ ಕೆಲಸಗಾರರು ಕೆಲಸಕ್ಕೆ ಹಾಜರಾಗಲಿದ್ದಾರೆ. ನಿನ್ನೆ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಚಂದ್ರಶೇಖರ್ ರಾವ್, ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಸರಿದಾರಿಗೆ ತರಲು ಹಲವು ಕ್ರಮಗಳನ್ನ ಪ್ರಕಟಿಸಿದರು.
ಸಚಿವ ಸಂಪುಟದ ತೀರ್ಮಾನಗಳನ್ನು ನೋಡುವುದಾದರೆ:
- ಹಲವು ದಿನಗಳಿಂದ ಪ್ರತಿಭಟನಾ ನಿರತ ನೌಕರರು ಕೆಲಸಕ್ಕೆ ಹಾಜರಾಗಲು ಯಾವುದೇ ಷರತ್ತು ವಿಧಿಸಿಲ್ಲ
- ಸಂಸ್ಥೆ ಕಾರ್ಯನಿರ್ವಹಣೆಗೆ ತಕ್ಷಣಕ್ಕೆ 100 ಕೋಟಿ ರೂ.ಸಹಾಯಧನ ಘೋಷಣೆ
- ಮುಂದಿನ ಸೋಮವಾರದಿಂದ ಕಿ.ಮೀಗೆ 20 ಪೈಸೆ ಬಸ್ ದರ ಹೆಚ್ಚಳ ಮಾಡಲು ಸಾರಿಗೆ ಸಂಸ್ಥೆಗೆ ಅನುಮತಿ.
- ಹೋರಾಟದ ಸಮಯದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಸ್ಥರಿಗೆ ಕೆಲಸ ನೀಡಲು ನಿರ್ಧಾರ.
- ಸರ್ಕಾರ ನೌಕರರ ಹಿತರಕ್ಷಣಾ ಸಮಿತಿ ರಚಿಸುವ ತೀರ್ಮಾನ ಕೈಗೊಂಡಿದೆ.
ಅಕ್ಟೋಬರ್ 5 ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 50 ಸಾವಿರ ನೌಕರರು ಪ್ರತಿಭಟನೆ ಹಾಗೂ ಮುಷ್ಕರ ಆರಂಭಿಸಿದ್ದರು.