ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದಿರುವ ಜಮಾತ್-ಉಲೇಮಾ-ಇ-ಹಿಂದ್, ಪ್ರತ್ಯೇಕವಾದಿ ಚಳುವಳಿ ದೇಶಕ್ಕೆ ಮಾತ್ರ ಅಪಾಯಕಾರಿಯಲ್ಲ, ಇದು ಕಾಶ್ಮೀರದ ಜನರಿಗೂ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದೆ.
ನವದೆಹಲಿಯಲ್ಲಿ ಜಮಾತ್-ಉಲೇಮಾ-ಇ-ಹಿಂದ್ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಸಂಸ್ಥೆ ಈ ಬಗ್ಗೆ ನಿರ್ಣಯ ಅಂಗೀಕರಿಸಿದೆ. ನಾವು ಕಾಶ್ಮೀರಿಗಳ ಆಸೆ ಆಶೋತ್ತರಗಳ ಬಗ್ಗೆ ತಿಳಿದಿದ್ದೇವೆ ಮತ್ತು ಸ್ವಗೌರವ ಹಾಗು ಅವರ ಸಾಂಸ್ಕೃತಿಕ ವಿಶೇಷತೆಯನ್ನು ನಾವು ಗೌರವಿಸುತ್ತೇವೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗುವ ಮೂಲಕ ರಾಜ್ಯದ ಸರ್ವತೋಮುಖ ಏಳಿಗೆ ಸಾಧ್ಯ ಎಂದು ಜಮಾತ್ ಉಲೇಮಾ ಈ ಹಿಂದ್‌ನ ಪ್ರಧಾನ ಕಾರ್ಯದರ್ಶಿ ಮೌಲನಾ ಮಹಮ್ಮದ್ ಮದನಿ ಹೇಳಿದ್ರು.
ಪಾಕ್ ಶಕ್ತಿಗಳು ಕಾಶ್ಮೀರವನ್ನು ನಾಶ ಮಾಡುವ ಉದ್ದೇಶ ಹೊಂದಿವೆ ಎಂದು ಆರೋಪಿಸಿರುವ ಅವರು, ದೌರ್ಜನ್ಯಕ್ಕೊಳಗಾಗಿ ಅಸಹಾಯಕರಾಗಿರುವ ಕಾಶ್ಮೀರದ ಜನರು ಸದ್ಯ ಅಡಕತ್ತರಿಯಲ್ಲಿ ಸಿಕ್ಕಿಹಾಕ್ಕೊಂಡಿದ್ದಾರೆ. ವೈರಿಗಳು ಕಾಶ್ಮೀರವನ್ನು ಯುದ್ದಭೂಮಿಯನ್ನಾಗಿ ಬಳಸಿಕೊಂಡು ಕಾಶ್ಮೀರಿಗಳನ್ನು ತಮ್ಮ ರಕ್ಷಣಾ ಕವಚವನ್ನಾಗಿ ಬಳಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳನ್ನು ಗೌರವಿಸಬೇಕಿದೆ. ಜೊತೆಗೆ ಸರ್ಕಾರ ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಂತೆ ಒತ್ತಾಯಿಸಿದೆ. ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ಬಳಿಕ ಜಮಾತ್ ಉಲೇಮಾ ಈ ನಿರ್ಣಯ ಅಂಗೀಕರಿಸಿದೆ.