ನವದೆಹಲಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ (ಕೆಡಿಎ) ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ಮನವಿ ಪತ್ರದಲ್ಲಿ ಆರ್‌ಎಸ್‌ಎಸ್ ಶಿಫಾರಸು ಪತ್ರ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದರು ಕೆಂಡಾಮಂಡಲರಾಗಿದ್ದಾರೆ. ಸರ್ಕಾರದ ದಾಖಲೆ ಪುಸ್ತಕದಲ್ಲಿ ಸಂಘವೊಂದರ ಶಿಫಾರಸು ಪತ್ರ ಇರುವುದನ್ನು ಖಂಡಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿದ್ದ ಸಭೆಯಿಂದ ಸಂಸದರು ಹೊರನಡೆದಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಸದರ ನೇತೃತ್ವದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗವು ದೆಹಲಿಗೆ ತೆರಳಿತ್ತು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ನಿವಾಸದಲ್ಲಿ ನಿಯೋಗದ ಸದಸ್ಯರು ಸಭೆ ಸೇರಿದ್ದರು. ಆದರೆ ಸರ್ಕಾರಿ ಕಡತದಲ್ಲಿ ಆರ್‌ಎಸ್‌ಎಸ್ ಶಿಫಾರಸು ಪತ್ರ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯಸಭಾ ಕಾಂಗ್ರೆಸ್ ಸದಸ್ಯರಾದ ರಾಜೀವ್ ಗೌಡ, ಎಲ್. ಹನುಮಂತಯ್ಯ, ಬಿ.ಕೆ.ಹರಿಪ್ರಸಾದ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರು ಕೆಂಡಾಮಂಡಲರಾಗಿದ್ದು, ಸಭಾತ್ಯಾಗ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಕೆಡಿಎಯು ಸರ್ಕಾರ ನಡೆಸುವ ಸಾಂಸ್ಕೃತಿಕ ಸಂಘಟನೆಯಾಗಿದೆ. ಭಾಷೆ, ನೆಲ, ಜಲ ಮತ್ತು ಇತರ ಎಲ್ಲ ಪ್ರಾದೇಶಿಕ ಹಕ್ಕುಗಳ ರಕ್ಷಣೆಗಾಗಿ ಕೆಡಿಎ ಇದೆ. ಆದರೂ ಕೂಡ 2018ರಲ್ಲಿ ಆರ್ಎಸ್ಎಸ್ನಿಂದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಅಂಗೀಕರಿಸಲ್ಪಟ್ಟ ನಿರ್ಣಯವನ್ನೊಳಗೊಂಡ ಪತ್ರವು ಕೆಡಿಎ ಮನವಿ ಪತ್ರದಲ್ಲಿದ್ದು, ಇದು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣ ಅವರೂ ಕೂಡ ಕಾಂಗ್ರೆಸ್ ಸಂಸದರ ನಡೆ ಬಗ್ಗೆ ಪ್ರತಿಕ್ರಿಯಿಸಿದ್ದು, ನಮ್ಮ ನಿರ್ಣಯವು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ. ಆರ್‌ಎಸ್‌ಎಸ್ ತನ್ನ ನಿರ್ಣಯದಲ್ಲಿ ಮಾತೃಭಾಷೆ ಆಧಾರಿತ ಶಿಕ್ಷಣಕ್ಕೆ ಒಲವು ತೋರಿದೆ ಮತ್ತು ಮಾತೃಭಾಷೆಗೆ ಪ್ರಾಮುಖ್ಯತೆ ನೀಡುವಂತೆ ಆಗ್ರಹಿಸಿದೆ. ಬಿಜೆಪಿ ಸರ್ಕಾರ ಕೇಂದ್ರದಲ್ಲಿರುವುದರಿಂದ, ಕನ್ನಡವನ್ನು ಶಿಕ್ಷಣದಲ್ಲಿ ಪ್ರಾಥಮಿಕ ಮಾಧ್ಯಮವನ್ನಾಗಿ ಕಡ್ಡಾಯ ಮಾಡಲು ಕೇಂದ್ರದ ಗಮನ ಸೆಳೆಯಲು ನಾವು ಆರ್‌ಎಸ್‌ಎಸ್ ನಿರ್ಣಯವನ್ನೊಳಗೊಂಡ ಪತ್ರ ಇರಿಸಿದ್ದೇವೆ ಎಂದು ತಿಳಿಸಿದ್ದಾರೆ.