ಕಾನ್ಪುರ (ಉತ್ತರ ಪ್ರದೇಶ): 90 ರ ದಶಕದ ಬಾಲಿವುಡ್ ಜನಪ್ರಿಯ ಚಲನಚಿತ್ರ 'ಹಮ್ ಆಪ್ ಕೆ ಹೈ ಕೌನ್' ನಲ್ಲಿರುವ "ದಿದಿ ತೇರಾ ದೇವಾರ್ ದಿವಾನಾ" ಹಾಡಿನ ಸಂಗೀತಕ್ಕೆ ಹೊಸ ಪದಗಳನ್ನು ಜೋಡಿಸಿ ಕೋವಿಡ್ -19 ಲಾಕ್ ಡೌನ್ ನಡುವೆ ಗಾಳಿಪಟ ಹಾರಿಸದಂತೆ ಕಾನ್ಪುರದ ಪೊಲೀಸ್ ಸಿಬ್ಬಂದಿ ಭಾನುವಾರ ವಿನೂತನವಾಗಿ ಒತ್ತಾಯಿಸಿದ್ದಾರೆ.
ಈ ಸೂಪರ್ ಹಿಟ್ ಹಾಡಿನ ಸಾಲುಗಳನ್ನು ಬದಲಿಸಿ "ಭೈಯಾ ಮೇರೆ ಪತಂಗ್ ಮತ್ ಉಡಾನಾ, ನಹಿ ತೋಹ್ ಜೈಲು ಜಾನಾ ಪಡೇಗಾ (ಸಹೋದರ ಗಾಳಿಪಟ ಹಾರಿಸದಿರು. ಇಲ್ಲದಿದ್ದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ)" ಎಂದು ಹಾಡಿದ್ದಾರೆ. ಈ ಮೂಲಕ ಲಾಕ್‌ಡೌನ್ ಮಾನದಂಡಗಳನ್ನು ಅನುಸರಿಸಲು ಜನರಿಗೆ ತಿಳಿಸಿದ್ದಾರೆ.
ಇನ್ನೂ ಮಕ್ಕಳಿಗೆ ಗಾಳಿಪಟ ಹಾರಿಬಿಡಬಾರದೆಂದು ಹಾಡಿನ ಮೂಲಕವೇ ಪೊಲೀಸರು ಪೋಷಕರಿಗೆ ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಉತ್ತರಪ್ರದೇಶದಲ್ಲಿ 1,868 ಕೋವಿಡ್ -19 ಪ್ರಕರಣಗಳಿವೆ, ಅದರಲ್ಲಿ 289 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು 29 ರೋಗಿಗಳು ಮಾರಣಾಂತಿಕ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.