ಕನ್ಹಯ್ಯ ಕುಮಾರ್ ಬೆಂಗಾವಲು ವಾಹನದ ಮೇಲೆ ಮತ್ತೆ ಅಟ್ಯಾಕ್ : ಇದು ಎರಡು ವಾರದಲ್ಲಿ 7ನೇ ದಾಳಿ - "Jan Gan Man Yatra"
ಜನ ಗಣ ಮನ ಯಾತ್ರೆ ಅಂಗವಾಗಿ ಬಿಹಾರದ ಗಯಾದ ಶೆರ್ಘಾಟಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕನ್ಹಯ್ಯ ಕುಮಾರ್, ಪಿಎಂ ನರೇಂದ್ರ ಮೋದಿ ಸರ್ಕಾರದ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಗಯಾ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮುಖಂಡ ಕನ್ಹಯ್ಯ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಬಿಹಾರದಲ್ಲಿ ಮಂಗಳವಾರ ಮತ್ತೆ ದಾಳಿ ನಡೆಸಲಾಗಿದ್ದು, ಜೊತೆಯಲ್ಲಿದ್ದ ಕಾಂಗ್ರೆಸ್ ಶಾಸಕರ ಕಾರನ್ನೂ ಶಂಕಿತ ಬಿಜೆಪಿ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ.
ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರೋಧಿಸಿ ಕಳೆದ ತಿಂಗಳು ಕನ್ಹಯ್ಯ ಕುಮಾರ್ರ ಜನ ಗಣ ಮನ ಯಾತ್ರೆ ಪ್ರಾರಂಭವಾಗಿದ್ದು, ಇನ್ನು 15 ದಿನಗಳಲ್ಲಿ ರ್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಕಳೆದ ಎರಡು ವಾರಗಳಲ್ಲಿ ಬೆಂಗಾವಲು ವಾಹನದ ಮೇಲೆ ನಡೆದ ಏಳನೇ ದಾಳಿಯಾಗಿದೆ ಎಂದು ಯಾತ್ರೆಯ ಸಂಘಟಕರು ಆರೋಪಿಸಿದ್ದಾರೆ.
ಜನ ಗಣ ಮನ ಯಾತ್ರೆ ಅಂಗವಾಗಿ ಬಿಹಾರದ ಗಯಾದ ಶೆರ್ಘಾಟಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕನ್ಹಯ್ಯ ಕುಮಾರ್, ಪಿಎಂ ನರೇಂದ್ರ ಮೋದಿ ಸರ್ಕಾರದ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ, ಕಾಂಗ್ರೆಸ್ ಶಾಸಕರಾದ ಶಕೀಲ್ ಅಹ್ಮದ್ ಖಾನ್ ಹಾಗೂ ಅವಧೇಶ್ ಕುಮಾರ್ ಸಿಂಗ್ ಕೂಡ ಸಭೆಯಲ್ಲಿ ಭಾಗಿಯಾಗಿ ಭಾಷಣ ಮಾಡಿದರು. ಬಳಿಕ ಬೈಕ್ನಲ್ಲಿ ಬಂದ ಕೆಲ ದುಷ್ಕರ್ಮಿಗಳು ಕನ್ಹಯ್ಯ ಕುಮಾರ್ರ ಬೆಂಗಾವಲು ವಾಹನ ಹಾಗೂ ಅವಧೇಶ್ ಕುಮಾರ್ ಸಿಂಗ್ರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಕಾರಿನ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ.
ಇನ್ನು ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಈ ಸಂಬಂಧ ಪ್ರಕರಣ ದಾಖಲಾಗಿರುವುದಾಗಿ ಮೂಲಗಳು ತಿಳಿಸಿವೆ.