ಲಖನೌ (ಉತ್ತರ ಪ್ರದೇಶ): ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಗೋರಖ್‌ಪುರದ ಡಾ.ಕಫೀಲ್ ಖಾನ್, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧದ ತನ್ನ ಹೋರಾಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಸಿಎಎ ಪ್ರತಿಭಟನೆ ವೇಳೆ ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂಬ ಆರೋಪದಲ್ಲಿ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿತರಾಗಿದ್ದ ಖಾನ್, ಇತ್ತೀಚೆಗೆ ಆರೋಪ ಮುಕ್ತರಾಗಿ ಜೈಲಿನಿಂದ ಬಿಡುಗಡೆಯಾಗಿದ್ದರು. ಸದ್ಯ, ಜೈಪುರದಲ್ಲಿ ವಾಸಿಸುತ್ತಿರುವ ಖಾನ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ (ಯುಎನ್‌ಹೆಚ್‌ಆರ್‌ಸಿ) ಕ್ಕೆ ಪತ್ರವೊಂದನ್ನು ಬರೆದಿದ್ದು, ಭಾರತದಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳ ವ್ಯಾಪಕ ಉಲ್ಲಂಘನೆಯಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಿದವರ ಸದ್ದಡಗಿಸಲು ಎನ್ಎಸ್ಎ ಮತ್ತು ಯುಎಪಿಎಯಂತಹ ಕಠಿಣ ಕಾನೂನುಗಳನ್ನು ದುರುಪಯೋಗ ಮಾಡಲಾಗ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿಎಎ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟ ಕಾರ್ಯಕರ್ತರ ಮಾನವ ಹಕ್ಕುಗಳನ್ನು ರಕ್ಷಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಕ್ಕಾಗಿ ಖಾನ್ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಸರ್ಕಾರ ನಮ್ಮ ಮನವಿಯನ್ನು ಆಲಿಸಿಲ್ಲ ಎಂದು ದೂರಿದ್ದಾರೆ.
ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧ ಪೊಲೀಸರು ಅಧಿಕಾರವನ್ನು ಬಳಸಿಕೊಂಡು ಭಯೋತ್ಪಾದನೆ ನಿಗ್ರಹ ಮತ್ತು ರಾಷ್ಟ್ರೀಯ ಭದ್ರತಾ ಕಾನೂನುಗಳನ್ನು ಪ್ರಯೋಗಿಸುತ್ತಿದ್ದಾರೆ. ಇದು ಬಡವರು ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲೆ ಪರಿಣಾಮ ಬೀರುವಂತಹ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳನ್ನು ಉಲ್ಲಂಘಿಸುತ್ತದೆ ಎಂದು ಖಾನ್ ಪತ್ರದಲ್ಲಿ ತಿಳಿಸಿದ್ದಾರೆ.
ಜೈಲುವಾಸದ ತನ್ನ ದಿನಗಳನ್ನು ವಿವರಿಸಿದ ಖಾನ್, ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆಗೆ ಒಳಗಾಗಿದ್ದೆ. ಅನೇಕ ದಿನಗಳವರೆಗೆ ಆಹಾರ ಮತ್ತು ನೀರು ನೀಡದೆ, ಕಿರಿದಾದ ಮಥುರಾ ಜೈಲಿನಲ್ಲಿ 7 ತಿಂಗಳವರೆಗೆ ನನನ್ನು ಅಮಾನವೀಯವಾಗಿ ಮತ್ತು ಸಂಪೂರ್ಣ ಕಾನೂನು ಬಾಹಿರವಾಗಿ ನಡೆಸಿಕೊಂಡಿದ್ದರು. ಅದೃಷ್ಟವಶಾತ್ಎನ್ಎಸ್ಎ ಮತ್ತು ಇತರ ಬಂಧನ ವಿಸ್ತರಣೆಗಳನ್ನು ಹೈಕೋರ್ಟ್ ರದ್ದುಪಡಿಸಿತು ಎಂದು ಹೇಳಿದ್ದಾರೆ.