ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ನ ಪ್ರಭಾವಿ ನಾಯಕನೆಂದೇ ಗುರುತಿಸಿಕೊಂಡಿದ್ದ ಹಾಗೂ ರಾಹುಲ್ ಗಾಂಧಿ ಆಪ್ತವಲಯದಲ್ಲಿ ಕಾಣಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಇವತ್ತು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹೂಗುಚ್ಛ ನೀಡಿ, ಶಾಲು ಹೊದಿಸಿ ಸಿಂಧಿಯಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಮೂಲಕ 18 ವರ್ಷಗಳ ಕಾಂಗ್ರೆಸ್ ಜೊತೆಗಿನ ನಂಟನ್ನು ಗ್ವಾಲಿಯರ್‌ನ ಮಹಾರಾಜ ಕಡಿದುಕೊಂಡಿದ್ದಾರೆ.
ಬಿಜೆಪಿ ಸೇರಿಕೊಳ್ತಿದ್ದಂತೆ ಮಾತನಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ಮೇಲಿನ ತಮ್ಮ ಅಸಮಾಧಾನ ತೋಡಿಕೊಂಡರು. ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಿಸಿದ ಅವರು, ದೇಶದ ಜನರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ದೇಶ ಸುರಕ್ಷಿತವಾಗಿದೆ ಎಂದು ನನಗನ್ನಿಸುತ್ತಿದೆ. ಈ ಹಿಂದಿನಿಂದಲೂ ಕಾಂಗ್ರೆಸ್ ನನಗೆ ನೋವು ನೀಡಿದೆ. ನಿನ್ನೆ ನಮ್ಮ ತಂದೆಯ 75ನೇ ಪುಣ್ಯಸ್ಮರಣೆ. ಇಂತಹ ಸಂದರ್ಭದಲ್ಲಿ ನಾನು ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಸೂಕ್ತ ಎಂದು ಅವರು ಹೇಳಿದರು.
ಕಾಂಗ್ರೆಸ್ನಲ್ಲಿದ್ದುಕೊಂಡು ದೇಶದ ಜನರ ಸೇವೆ ಮಾಡಲು ಸಾಧ್ಯವಾಗದೇ ಹೋದಾಗ ನಿಜಕ್ಕೂ ನನಗೆ ನೋವಾಗಿದೆ. ಇದೀಗ ಮತ್ತೊಂದು ಅವಕಾಶ ಸಿಕ್ಕಿದ್ದು, ದೇಶದ ಜನ ಸೇವೆ ಮಾಡುವೆ ಎಂದಿದ್ದಾರೆ.