ಲಖನೌ: ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸೆ. 30 ರಂದು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.
ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಬಿಜೆಪಿ ಮುಖಂಡರಾದ ಎಂ.ಎಂ.ಜೋಶಿ, ಉಮಾ ಭಾರತಿ ಮತ್ತು ವಿನಯ್ ಕಟಿಯಾರ್ ಸೇರಿದಂತೆ ಪ್ರಕರಣದ ಎಲ್ಲಾ 32 ಆರೋಪಿಗಳನ್ನು ತೀರ್ಪಿನ ದಿನದಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಬಿಐ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಸೂಚಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಲಿಖಿತ ವಾದಗಳನ್ನು ಸಲ್ಲಿಸಲು ಅನುಮತಿ ಕೋರಿ ಹಾಜಿ ಮಹಮೂದ್ ಅಹ್ಮದ್ ಮತ್ತು ಸಯ್ಯದ್ ಅಖ್ಲಾಕ್ ಎಂಬ ಇಬ್ಬರು ಪ್ರಾಸಿಕ್ಯೂಷನ್ ಸಾಕ್ಷಿಗಳು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಕಳೆದ ತಿಂಗಳು ತಿರಸ್ಕರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ 400 ಪುಟಗಳ ತನ್ನ ಲಿಖಿತ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರ ಅಧಿಕಾರಾವಧಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದ್ದ ಸುಪ್ರೀಂ ಕೋರ್ಟ್, ಆ ವೇಳೆಗೆ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ನೀಡುವಂತೆ ನಿರ್ದೇಶಿಸಿತ್ತು. ಪ್ರಕರಣದ ತೀರ್ಪು ಪ್ರಕಟಿಸಲು ವಿಶೇಷ ಸಿಬಿಐ ನ್ಯಾಯಾಧೀಶ ಎಸ್.ಕೆ. ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಇನ್ನೊಂದು ತಿಂಗಳು ಕಾಲಾವಕಾಶ ನೀಡಿತ್ತು.