ಹೈದರಾಬಾದ್(ತೆಲಂಗಾಣ) : ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್ಎಂಸಿ) ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಂಡಿರುವ ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಮುಖಂಡರು ರಾಷ್ಟ್ರ ನಾಯಕರಿಂದ ರೋಡ್ ಶೋ ನಡೆಸಲು ಮುಂದಾಗಿದ್ದಾರೆ.
ನಡೆದ ಹಲವು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ರಾಷ್ಟ್ರ ನಾಯಕರು ತೆಲಂಗಾಣಕ್ಕೂ ಕಾಲಡಲಿದ್ದಾರೆ. ಅಷ್ಟೇ ಅಲ್ಲ ಭರ್ಜರಿ ರೋಡ್ ಶೋ ಕೂಡ ನಡಸಲಿದ್ದಾರೆ. ಈ ವರೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ಪಕ್ಷದ ಮುಖಂಡರು ಪ್ರಚಾರ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ಧೈರ್ಯ ಇದ್ರೆ ಹೈದರಾಬಾದ್ಗೆ ಬಂದು ಮೋದಿ ಸಭೆ ನಡೆಸಲಿ: ಓವೈಸಿ ಸವಾಲು
ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕೂಡ ನವೆಂಬರ್ 27 ರಂದು ಭವ್ಯ ರೋಡ್ ಶೋ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದ ನಂತರ, ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವತ್ತ ದೃಷ್ಟಿ ಹರಿಸಿದೆ. ಬಿಜೆಪಿ ಚುನಾವಣಾ ಪ್ರಚಾರವನ್ನು ಉತ್ತೇಜಿಸಲು, ಜೆಪಿ ನಾಡ್ಡಾ ನಾಳೆ ರೋಡ್ ಶೋ ಮಾಡಲಿದ್ದಾರೆ. ಎರಡು ಕಿಲೋ ಮೀಟರ್ ಉದ್ದದ ರೋಡ್ ಶೋ ನಂತರ, ನಡ್ಡಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನಡ್ಡಾ ಅವರೊಂದಿಗೆ ಭೂಪೇಂದರ್ ಯಾದವ್ ವೈ ಸತ್ಯಕುಮಾರ್ ಮತ್ತು ಗಂಗಾಪುರ ಕಿಶನ್ ರೆಡ್ಡಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಹ ರೋಡ್ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ’’ಬಿಜೆಪಿ ಅಧಿಕಾರಕ್ಕೆ ಬಂದರೆ ಓವೈಸಿ ಸಹೋದರರನ್ನು ನನ್ನ ಕಾಲ್ ಕೆಳಗೆ ಇಟ್ಟುಕೊಳ್ಳುವೆ'‘
ಜಿಹೆಚ್ಎಂಸಿ ಚುನಾವಣೆಗೆ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಬಿಜೆಪಿಯ ಉನ್ನತ ಅಧಿಕಾರಿಗಳು ಪ್ರಚಾರ ನಡೆಸಲಿದ್ದಾರೆ.
ಇಂದು ಜಿಹೆಚ್ಎಂಸಿಗೆ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಫಡ್ನವೀಸ್ ಬಿಡುಗಡೆ ಮಾಡಿದರು. ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಮತ್ತು ಸ್ಮೃತಿ ಇರಾನಿ ಕೂಡ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಜಿಹೆಚ್ಎಂಸಿ ಚುನಾವಣೆಗೆ ಡಿಸೆಂಬರ್ 1 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 4 ರಂದು ಮತ ಎಣಿಕೆ ನಡೆಯಲಿದೆ.