ನವದೆಹಲಿ : ಹೆಚ್ಚಿದ ಹಾಸ್ಟೆಲ್ ಶುಲ್ಕವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ದೀರ್ಘಕಾಲದವರೆಗೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ನ್ಯಾಯಾಲಯದಿಂದ ದೊಡ್ಡ ಪರಿಹಾರ ದೊರೆತಿದೆ. ಜನವರಿ 24 ರಿಂದ ಫೆಬ್ರವರಿ 3 ರವರೆಗೆ ವಿದ್ಯಾರ್ಥಿಗಳು ಹಳೆಯ ಶುಲ್ಕ ರಚನೆಯಡಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಚಳಿಗಾಲದ ಸೆಮಿಸ್ಟರ್‌ಗೆ ನೋಂದಾಯಿಸಿಕೊಳ್ಳಬಹುದು ಎಂದು ನ್ಯಾಯಾಲಯವು ಜೆಎನ್‌ಯು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದೆ.
ವಿದ್ಯಾರ್ಥಿಗಳ ಬೇಡಿಕೆಗಳನ್ನು ಪರಿಗಣಿಸಿ ಸೂಚನೆ ನೀಡಿದ ನ್ಯಾಯಾಲಯ :
ಹೆಚ್ಚಿದ ಶುಲ್ಕಗಳು, ಹಾಸ್ಟೆಲ್ ಕೈಪಿಡಿ ಮತ್ತು ರೋಲ್‌ಬ್ಯಾಕ್ ಬಗ್ಗೆ ಜೆಎನ್‌ಯು ವಿದ್ಯಾರ್ಥಿಗಳು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಕಾರಣದಿಂದ ವಿದ್ಯಾರ್ಥಿಗಳು ಮಳೆಗಾಲದ ಸೆಮಿಸ್ಟರ್ ಪರೀಕ್ಷೆಗಳನ್ನು ಬಹಿಷ್ಕರಿಸಿದ್ದರ ಜೊತೆಗೆ ಚಳಿಗಾಲದ ಸೆಮಿಸ್ಟರ್ ನೋಂದಣಿ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಹೋರಾಟಕ್ಕಿಳಿದಿದ್ದರು. ಇದು ದೇಶಾದ್ಯಂತ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು.
ಚಳಿಗಾಲದ ನೋಂದಣಿಗೆ ಗಡುವು ವಿಸ್ತರಿಸಿದ ಕೋರ್ಟ್ : ಜೆಎನ್‌ಯು ಆಡಳಿತವು ಚಳಿಗಾಲದ ಸೆಮಿಸ್ಟರ್‌ಗೆ ನೋಂದಣಿ ಪ್ರಕ್ರಿಯೆಯನ್ನು ಸ್ವಲ್ಪ ಶುಲ್ಕ ಕಡಿತಗೊಳಿಸುವ ಮೂಲಕ ಪ್ರಾರಂಭಿಸಿತ್ತು. ಆಗ ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಪರಿಹರಿಸುವಂತೆ ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಪರಿಗಣಿಸಿದ ನ್ಯಾಯಾಲಯ ಹಳೆಯ ಶುಲ್ಕ ಮುಂದುವರೆಸುವಂತೆ ಆದೇಶ ನೀಡಿದೆ. ಜೊತೆಗೆ, ಚಳಿಗಾಲದ ನೋಂದಣಿಯ ದಿನಾಂಕವನ್ನು ಫೆಬ್ರವರಿ 3 ರವರೆಗೆ ವಿಸ್ತರಿಸಿದೆ. ಜನವರಿ 24 ರಿಂದ ಫೆಬ್ರವರಿ 3 ರವರೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಹಳೆಯ ಶುಲ್ಕದ ಅಡಿ ವಿದ್ಯಾರ್ಥಿಗಳು ದಾಖಲಾಗಲು ಸೂಚಿಸಿದೆ.