ನವದೆಹಲಿ: ಜೆಎನ್‌ಯು ಕ್ಯಾಂಪಸ್‌ನಲ್ಲಿ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ಗಳು ಕೋವಿಡ್ -19 ಪಾಸಿಟಿವ್ ಕೇಸ್ನ್ನು ದೃಢಪಡಿಸಿದ ನಂತರ, ವಿಶ್ವವಿದ್ಯಾಲಯವು ಕ್ಯಾಂಪಸ್‌ನಲ್ಲಿ ಉಳಿದಿರುವ ವಿದ್ಯಾರ್ಥಿಗಳಿಗೆ ತಮ್ಮ ಊರಿಗೆ ಮರಳುವಂತೆ ಸೂಚಿಸಿದೆ.
ಗೃಹ ಸಚಿವಾಲಯ ಹಾಗೂ ದೆಹಲಿ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ವಿಶ್ವವಿದ್ಯಾಲಯವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರೂ ಸಹ, ಸ್ವಂತ ಮನೆಯಂತಹ ಸುರಕ್ಷಿತ ಸ್ಥಳ ಬೇರೊಂದಿಲ್ಲ ಎಂದು ತಿಳಿಸಿದೆ.
ಪ್ರಸ್ತುತ ಸನ್ನಿವೇಶದಲ್ಲಿ, ಶೈಕ್ಷಣಿಕ ಸಂಸ್ಥೆಗಳನ್ನು ಸದ್ಯಕ್ಕೆ ತೆರೆಯುವ ಸಾಧ್ಯತೆಯಿಲ್ಲ ಹಾಗೂ ಇದು ಆಗಸ್ಟ್ 15 ರವರೆಗೆ ವಿಳಂಬವಾಗಬಹುದು. ಆದ್ದರಿಂದ, ದೆಹಲಿಯಲ್ಲಿ ಕೋವಿಡ್ -19 ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಎಂಬ ಅಂಶವನ್ನು ಗಮನಿಸಿದರೆ, ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವ ಎಲ್ಲಾ ವಿದ್ಯಾರ್ಥಿಗಳು ಬೇಗನೆ ತಮ್ಮ ಮನೆಗೆ ಮರಳುವುದು ಸೂಕ್ತ ಎಂದು ವಿದ್ಯಾರ್ಥಿಗಳ ಡೀನ್ ಪ್ರೊಫೆಸರ್ ಸುಧೀರ್ ಪ್ರತಾಪ್ ಸಿಂಗ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಈಗಾಗಲೇ ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಹೊರ ಹೋಗಿರುವ ಹಾಸ್ಟೆಲ್ ನಿವಾಸಿಗಳು ಸಹ ವಿವಿ ಮತ್ತೆ ತೆರೆಯುವವರೆಗೆ ಹಿಂದಿರುಗಬಾರದು ಎಂದು ತಿಳಿಸಲಾಗಿದೆ.
ಕಳೆದ ತಿಂಗಳು ಸಹ, ಜೆಎನ್‌ಯು ತನ್ನ ಹಾಸ್ಟೆಲ್‌ಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಮನೆಗಳಿಗೆ ಮರಳುವಂತೆ ಕೇಳಿಕೊಂಡಿತ್ತು.