ರಾಂಚಿ: ಜಾಂರ್ಖಂಡ್ನ 81 ಕ್ಷೇತ್ರಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ 'ಮಹಾಘಟಬಂಧನ'ಕ್ಕೆ ಮತದಾರಪ್ರಭು ಜೈಕಾರ ಹಾಕಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ರಘುಬರ್ ದಾಸ್ ನೇತೃತ್ವದ ಬಿಜೆಪಿ ಸರ್ಕಾರ ಉರುಳಿ ಬಿದ್ದಂತಾಗಿದೆ.
ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ಗಢ ರಾಜ್ಯಗಳ ಬಳಿಕ ಇದೀಗ ಜಾರ್ಖಂಡ್ ರಾಜ್ಯವನ್ನು ಬಿಜೆಪಿ ಕಳೆದುಕೊಂಡು, ಕೇಸರಿಯ ಬಣ್ಣ ಮಾಸುವಂತೆ ಮಾಡಿದರೆ, ಕಮಲದ ದಳಗಳು ಒಂದೊಂದಾಗಿ ಉದುರಿ ಹೂವು ಬಾಡುತ್ತಿದೆ.
81 ಕ್ಷೇತ್ರಗಳ ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 41 ಸ್ಥಾನಗಳ ಬಹುತಮತ ಅವಶ್ಯಕತೆ ಇತ್ತು. ಅದರಂತೆ ಕಾಂಗ್ರೆಸ್ 16 ಮತ್ತು ಆರ್‌ಜೆಡಿ 1 ಹಾಗೂ ಜೆಎಂಎಂ ಒಟ್ಟು 30 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಜಾರ್ಖಂಡ್ನಲ್ಲಿ ಮಹಾಘಟಬಂಧನ್ ವರ್ಕೌಟ್ ಆಗಿದೆ. ಈ ಮೈತ್ರಿ ಪಕ್ಷ ಒಟ್ಟು 47 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮೈತ್ರಿಕೂಟಕ್ಕೆ ರಾಜ್ಯದ ಜನತೆ ಸ್ಪಷ್ಟ ಬಹುಮತ ನೀಡಿದ್ದಾರೆ. 30 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ಜೆಎಂಎಂ ರಾಜ್ಯದ ಏಕ ಮಾತ್ರ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಎರಡನೇ ಬಾರಿಗೆ ಜಾರ್ಖಂಡ್ನ ಮುಖ್ಯಮಂತ್ರಿ ಗಾದಿಗೇರಲು ಜೆಎಂಎಂ ನಾಯಕ ಹೇಮಂತ್ ಸೊರೆನ್ ಸಿದ್ಧರಾಗಿದ್ದಾರೆ.
ಈ ಬಾರಿ 81 ಕ್ಷೇತ್ರಗಳ ಪೈಕಿ 79 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮುಂದಾಗಿತ್ತು. ಆದರೆ ಜೆಎಂಎಂ ಮುಖಂಡ ಹೇಮಂತ್ ಸೊರೆನ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಸೇರಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ತಂತ್ರ ಹೆಣೆದಿತ್ತು. ಈ ಮಹಾಘಟಬಂಧನ್, ಬಿಜೆಪಿಯನ್ನು ಪಟ್ಟದಿಂದ ಕೆಳಗಿಳಿಸುವಲ್ಲೂ ಯಶಸ್ವಿಯಾಯ್ತು. 43 ಸ್ಥಾನಗಳಲ್ಲಿ ಜೆಎಂಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ 31 ಮತ್ತು ಆರ್‌ಜೆಡಿ 7 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಇದರ ಜೆಎಂಎಂ 30 , ಕಾಂಗ್ರೆಸ್ 16 ಹಾಗೂ ಆರ್‌ಜೆಡಿ 1 ಕ್ಷೇತ್ರದಲ್ಲಿ ಗೆದ್ದು, ಒಟ್ಟು 47 ಕ್ಷೇತ್ರಗಳಲ್ಲಿ ಮಹಾಘಟಬಂಧನ್ ಗೆದ್ದಿದೆ. ಈ ಮೂಲಕ ಬಹುಮತಕ್ಕೆ ಬೇಕಾದ 41ಕ್ಕೂ ಕ್ಷೇತ್ರಗಳು ಈ ಮೈತ್ರಿ ಪಕ್ಷಗಳಿಗೆ ಲಭಿಸಿದೆ.
ಅಧಿಕಾರ ಕಳೆದುಕೊಂಡ ಬಿಜೆಪಿ...
ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ರಘುಬರ್ ದಾಸ್ ನೇತೃತ್ವದ ಆಡಳಿತರೂಢ ಬಿಜೆಪಿ ರಾಜ್ಯದಲ್ಲಿ ಹೀನಾಯ ಸೋಲು ಕಂಡಿದೆ. ಫಲಿತಾಂಶದ ಬೆನ್ನಲ್ಲೇ ರಘುಬರ್ ದಾಸ್, ರಾಜ್ಯಪಾಲ ದ್ರೌಪದಿ ಮುರ್ಮುಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
2014 ರ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಈ ಬಾರಿ ಒಟ್ಟು 25 ಕ್ಷೇತ್ರಗಳನ್ನು ಗೆಲ್ಲುವಷ್ಟರಲ್ಲಿ ಸುಸ್ತುಬಿದ್ದಿದೆ. ಈ ಮೂಲಕ ಮುಖ್ಯಮಂತ್ರಿ ಸೀಟನ್ನು ಉಳಿಸಿಕೊಳ್ಳುವಲ್ಲಿ ರಘುಬರ್ ದಾಸ್ ವಿಫಲರಾಗಿದ್ದಾರೆ. ಇದರ ಮಧ್ಯೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮುಖ್ಯಮಂತ್ರಿ ರಘುಬರ್ ದಾಸ್, ಇದು ಪಕ್ಷದ ಸೋಲಲ್ಲ, ನನ್ನ ಸೋಲು. ಸೋಲಿಗೆ ಏನು ಕಾರಣ ಎಂಬುದರ ಬಗ್ಗೆ ಪರಾಮರ್ಶೆ ಮಾಡುಕೊಳ್ಳುವುದಾಗಿ ಹೇಳಿದ್ದಾರೆ. ಜತೆಗೆ ಜನರ ಜನಾದೇಶ ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ.
ಒಟ್ಟು 5 ಹಂತಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸುಮಾರು 2 ಕೋಟಿ 30 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 2014 ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, 5 ಸ್ಥಾನಗಳನ್ನು ಪಡೆದಿದ್ದ ಎಜೆಎಸ್ಯುನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯ ರಘುಬರ್ ದಾಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕರಿಸಿದ್ದರು. ಆದರೆ ಈ ಬಾರಿ ಎಜೆಎಸ್‌ಯು, ಸ್ವತಂತ್ರವಾಗಿ ಕಣಕ್ಕಳಿದಿತ್ತು.