ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಇಂದಿಗೆ ಒಂದು ವರ್ಷವಾಗಿದೆ. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಇವೆರಡು ಕೇಂದ್ರಾಡಳಿತ ಪ್ರದೇಶಗಳಾಗಿವೆ.
ಕೇಂದ್ರದ ಈ ತಕ್ಷಣದ ಕ್ರಮವೂ ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಸ್ಥಿತಿಗತಿಯ ಮೇಲೆ ಪರಿಣಾಮ ಬೀರಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಆರ್ಟಿಕಲ್ 370 ಮತ್ತು 35 ಎ ರದ್ದುಪಡಿಸಿದ ನಂತರ ಲಾಕ್ಡೌನ್ನನ್ನು ಸುಮಾರು ಏಳು ತಿಂಗಳುಗಳ ಕಾಲ ಹೇರಲಾಗಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಮತ್ತೆ ಕೋವಿಡ್ ಲಾಕ್ಡೌನ್ನನ್ನು ವಿಧಿಸಲಾಯಿತು. ಸುಮಾರು ಒಂದು ವರ್ಷ ಅವಧಿಯ ಲಾಕ್‌ಡೌನ್ ಈ ಪ್ರದೇಶದ ಆರ್ಥಿಕತೆಯನ್ನು ಕುಂಠಿತಗೊಳಿಸಿದೆ. ತಜ್ಞರ ಪ್ರಕಾರ ಲಾಕ್‌ಡೌನ್‌ನಿಂದ ಜಮ್ಮು ಕಾಶ್ಮೀರಕ್ಕೆ ಸುಮಾರು 40,000 ಕೋಟಿ ರೂ. ನಷ್ಟವಾಗಿದೆ.
ಜಮ್ಮ ಮತ್ತು ಕಾಶ್ಮೀರಕ್ಕಾದ ಈ ಆರ್ಥಿಕ ನಷ್ಟವು ನಿರುದ್ಯೋಗವನ್ನು ಸಹ ಸೃಷ್ಟಿಸಿದೆ. ದೊಡ್ಡ ಮತ್ತು ಸಣ್ಣ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (ಕೆಸಿಸಿಐ) ಅಧ್ಯಕ್ಷ ಶೇಖ್ ಆಶಿಕ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
"12 ತಿಂಗಳ ಅವಧಿಯ ಲಾಕ್‌ಡೌನ್ ಸಾರಿಗೆ ಮತ್ತು ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ವ್ಯಾಪಾರ ಕ್ಷೇತ್ರಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಎಲ್ಲರೂ ದೊಡ್ಡ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ದುರ್ಬಲ ಆರ್ಥಿಕ ಪರಿಸ್ಥಿತಿ ನಿರುದ್ಯೋಗವನ್ನು ಹೆಚ್ಚಿಸುತ್ತಿದೆ" ಎಂದು ಜಮ್ಮು ಕಾಶ್ಮೀರ ಆರ್ಥಿಕ ಒಕ್ಕೂಟದ (ಜೆ & ಕೆ) ಸಹ-ವಕ್ತಾರ ಅಬ್ರಾರ್ ಅಹ್ಮದ್ ಖಾನ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
2019ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ನೇರವಾಗಿ ಪರಿಣಾಮ ಬೀರಿತು. ಜಮ್ಮು ಮತ್ತು ಕಾಶ್ಮೀರದ ಮಾನವ ಹಕ್ಕುಗಳ ವೇದಿಕೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕಳೆದ ವರ್ಷ ಆಗಸ್ಟ್‌ನಲ್ಲಿ 370 ಮತ್ತು 35 ಎ ವಿಧಿಗಳನ್ನು ಸರ್ಕಾರ ರದ್ದುಪಡಿಸಿದ ನಂತರ ಜಮ್ಮು-ಕಾಶ್ಮೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದಿದ್ದಾರೆ.