ರಾಂಚಿ(ಜಾರ್ಖಂಡ್): ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲ ಬಡಿತಕ್ಕೊಳಗಾಗಿ ಬರೋಬ್ಬರಿ 12 ಜನರು ಮೃತಪಟ್ಟಿದ್ದು, 11 ಜನರು ಗಾಯಗೊಂಡಿದ್ದಾರೆ. ಗಿರಿಡಿಹ್‌ನ ಬಾರ್ನಿ ಮತ್ತು ಅರಾರಾ ಪ್ರದೇಶದಲ್ಲಿ ಮಹಿಳೆ ಸೇರಿ ಮೂವರು ಯುವಕರು ಮೃತಪಟ್ಟಿದ್ದಾರೆ.
ಭೋಜಾಹದ ಕರ್ನಾಪುರ ಪಂಚಾಯತ್‌ನಲ್ಲಿ ಲಲಿತಾ ದೇವಿ ಎಂಬ ಮಹಿಳೆ ಹಾಗೂ ಓರ್ವ ಬಾಲಕಿ ಮೃತಪಟ್ಟಿದ್ದು, ರೈತನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಲೋಹರ್‌ದಾಗ್ ಪ್ರದೇಶದಲ್ಲಿ ಓರ್ವ ಮಹಿಳೆ ಮತ್ತು ಓರ್ವ ಪುರುಷ ಸಾವಿಗೀಡಾಗಿದ್ದು, ಐದು ಮಕ್ಕಳು ಮಿಂಚಿನ ಸೆಳೆತಕ್ಕೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ಕುಸುಮ್‌ಘಾಟಿಯಲ್ಲಿ ಇಬ್ಬರು ಮಹಿಳೆಯರು ತಮ್ಮ ಜಾನುವಾರುಗಳನ್ನು ಮೇಯಿಸುತ್ತಿರುವ ವೇಳೆ ಸಿಡಿಲ ಬಡಿತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ಜೂನ್ 26 ರಂದು ಪಲಮು ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಅಬ್ಬರಿಸಿದ ಕಾರಣ ನಾಲ್ವರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಆರು ಮಂದಿ ಗಾಯಗೊಂಡಿದ್ದರು.
ಕೆಲವು ದಿನಗಳ ಹಿಂದೆ, ಬಿಹಾರದ ವಿವಿಧ ಜಿಲ್ಲೆಗಳಲ್ಲಿ 83 ಜನರು ಸಿಡಿಲ ಬಡಿತಕ್ಕೊಳಗಾಗಿ ಅಸುನೀಗಿದ್ದರೆ, ಉತ್ತರಪ್ರದೇಶ ರಾಜ್ಯದಲ್ಲಿ 24 ಜನರು ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದ ಹಲವಾರು ಪ್ರದೇಶಗಳಲ್ಲಿ ಭಾರೀ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ.