ರಾಂಚಿ(ಜಾರ್ಖಂಡ್): ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ರಾಜ್ಯದ ಜನರನ್ನು ಮರಳಿ ಕರೆತರಲು ಜಾರ್ಖಂಡ್ ಸರ್ಕಾರ ಇನ್ನೂ 56 ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.
ಕೇಂದ್ರವು ನಿಗದಿಪಡಿಸಿದ ಪ್ರೋಟೋಕಾಲ್ ಅನುಸರಿಸಿ ಮೇ 1 ರಂದು ಒಟ್ಟು 44 ರೈಲುಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿದ್ದ 50,028 ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರರನ್ನು ವಾಪಸ್ ಕರೆತಂದಿದೆ ಎಂದು ಕೋವಿಡ್ -19ರ ರಾಜ್ಯದ ನೋಡಲ್ ಅಧಿಕಾರಿ ಅಮರೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಸಾರಿಗೆ ಕಾರ್ಯದರ್ಶಿ ರವಿ ಕುಮಾರ್ ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಬಸ್‌ಗಳಲ್ಲಿ ಸುಮಾರು 30,000 ಜನರು ರಾಜ್ಯಕ್ಕೆ ಮರಳಿದ್ದಾರೆ. ಇದಲ್ಲದೆ, ಖಾಸಗಿ ವಾಹನಗಳಿಗೆ ಪರವಾನಗಿ ನೀಡಲಾಗುತ್ತಿದ್ದು, ಇಲ್ಲಿಯವರೆಗೆ 1,04,403 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ರಾಜ್ಯಕ್ಕೆ ಮರಳುತ್ತಿರುವವರಿಗೆ ಗ್ರಾಮ ಮುಖ್ಯಸ್ಥರು, ಅಂಗನವಾಡಿ ಕಾರ್ಯಕರ್ತರು ಮತ್ತು ಶಾಲಾ ಸಮಿತಿಗಳ ಸದಸ್ಯರ ಮೂಲಕ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಪತ್ತು ನಿರ್ವಹಣಾ ವಿಭಾಗದ ಕಾರ್ಯದರ್ಶಿ ಅಮಿತಾಬ್ ಕೌಶಲ್ ಹೇಳಿದರು.