ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕಾರು ಬಾಂಬ್ ದಾಳಿಯ ಸಂಚಿನ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಜೈಶ್-ಎ-ಮೊಹಮ್ಮದ್ ಸಂಘಟನೆ ಭಯೋತ್ಪಾದಕ ಚಟುವಟಿಕೆ ನಡೆಸಲಿದೆ ಎಂಬ ಮಾಹಿತಿ ಬಂದಿತ್ತು. ಆದ್ದರಿಂದ ಐಇಡಿ ಹೊತ್ತ ಕಾರಿನ ಚಾಲಕ ಆದಿಲ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನಾಗಿದ್ದು, ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕದಲ್ಲಿದ್ದ ಎಂದು ಶಂಕಿಸಲಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.
ಆದಿಲ್, ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಉದ್ದೇಶಿಸಿದ್ದ. ಜೈಶ್-ಎ-ಮೊಹಮ್ಮದ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಇವರಿಗೆ ಸಹಾಯ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಐಇಡಿ ಸ್ಫೋಟಕ ಹೊತ್ತು ಪುಲ್ವಾಮಾಕ್ಕೆ ಬಂದ ಕಾರು... ಪೊಲೀಸ್-ಸೇನೆಯಿಂದ ತಪ್ಪಿತು ಭಾರಿ ಅನಾಹುತ!
ಈ ದಾಳಿಯು ಫೆಬ್ರವರಿ 2019ರ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ನಡೆಸಿದ ದಾಳಿಯಂತೆಯೇ ಇದೆಯೇ ಎಂದು ಕೇಳಿದಾಗ, ಖಂಡಿತವಾಗಿಯೂ ಇದು ಭದ್ರತಾ ಪಡೆ, ಪೊಲೀಸರ ವಾಹನವನ್ನು ಮಾತ್ರ ಗುರಿಯಾಗಿಸಿತ್ತು ಎಂದಿದ್ದಾರೆ. ಐಇಡಿ ಬಾಂಬ್ ನಿಷ್ಕ್ರಿಯಗೊಳಿಸುವ ಮೂಲಕ ನಡೆಯಬಹುದಾದ ಅತಿ ದೊಡ್ಡ ಅನಾಹುತವನ್ನು ನಮ್ಮ ಪಡೆ ತಡೆದಿದೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.