ನವದೆಹಲಿ: ಜವಾಹರಲಾಲ್ ವಿಶ್ವ ವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ ಹಾಗೂ ಹೊಸ ಹಾಸ್ಟೆಲ್ ನಿಯಮಾವಳಿ ಪ್ರಸ್ತಾವ ವಿರೋಧಿಸಿ ಸಾವಿರಾರು ವಿದ್ಯಾರ್ಥಿಗಳು ಕಳೆದ ಕೆಲ ದಿನಗಳಿಂದ ಜೆಎನ್‌ಯು ಕ್ಯಾಂಪಸ್ ಹೊರಗೆ ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ಆದರೂ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.
ಜೆಎನ್‌ಯು ಆಡಳಿತ ಮಂಡಳಿ ಏಕಾಏಕಿಯಾಗಿ ಹಾಸ್ಟೆಲ್ ಶುಲ್ಕವನ್ನು ಶೇ.300ರಷ್ಟು ಏರಿಕೆ ಮಾಡಿರುವುದು ಜೆಎನ್‌ಯು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಷಯವನ್ನಿಟ್ಟುಕೊಂಡು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು.
ಕಳೆದ ನಾಲ್ಕು ದಿನಗಳ ಹಿಂದೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿ ನಡೆಯುತ್ತಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸಿದ್ದು, ಶಿಕ್ಷಣ ಮಂಡಳಿಗೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ಇದೇ ವೇಳೆ ಪ್ರಯತ್ನಿಸಿದ್ದರು. ಈ ವೇಳೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ತಳ್ಳಾಟ ಮತ್ತು ನೂಕಾಟ ಸಂಭವಿಸಿತ್ತು.
ಪ್ರತಿಭಟನೆ ವೇಳೆ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಮತ್ತು ಜೆಎನ್‌ಯು ವಿಸಿ ಎಂ.ಜಗದೀಶ್ ಕುಮಾರ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲೇ ಸಿಲುಕಿಕೊಂಡಿದ್ದರು. ಇಂದು ಬೆಳಗ್ಗೆ ಸಹ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೀಟಿಂಗ್ ನಡೆಸಲು ಅಲ್ಲಿನ ಆಡಳಿತ ಮಂಡಳಿ ಮುಂದಾದಾಗ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.
ಹೊಸ ಪ್ರಸ್ತಾವ ಇಂತಿದೆ!
ಇದೀಗ ಜೆಎನ್‌ಯು ಕಾರ್ಯಕಾರಿ ಸಮಿತಿಯಲ್ಲಿ ತೆಗೆದುಕೊಂಡಿರುವ ಹೊಸ ಪ್ರಸ್ತಾವದ ಪ್ರಕಾರ, ಡಬಲ್ ಸೀಟರ್ ಹಾಸ್ಟೆಲ್ ರೂಮಿನ ಶುಲ್ಕ 100 ರೂಪಾಯಿಗೆ ಇಳಿಕೆ ಮಾಡಲಾಗಿದೆ. 600ಕ್ಕೆ ಏರಿಕೆ ಮಾಡಲಾಗಿದ್ದ ಡಬಲ್ ಸೀಟರ್ ರೂಂ ಬೆಲೆ 200 ರೂಗೆ ಇಳಿಸಲಾಗಿದೆ. ಇನ್ನು, ವರ್ಷಕ್ಕೆ ಮರುಪಾವತಿಯಾಗುವ ಮೆಸ್ ಸೆಕ್ಯೂರಿಟಿ ಶುಲ್ಕವನ್ನು 5,500 ರೂನಿಂದ 12,000 ರೂಪಾಯಿಗೆ ಏರಿಕೆ ಮಾಡಲಾಗಿದೆ.