ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರದ ಹಂದ್ವಾರ ಪೊಲೀಸರು ಲಷ್ಕರ್ ಉಗ್ರ ಸಂಘಟನೆಗೆ ಸೇರಿದ್ದ ಮೂವರು ಭಯೋತ್ಪಾದಕರನ್ನು ಬಂಧಿಸಿದ್ದು, ಅವರಿಂದ ಸುಮಾರು 100 ಕೋಟಿ ರೂ. ಮೌಲ್ಯದ 21 ಕೆಜಿ ಹೆರಾಯಿನ್ ಹಾಗೂ 1.34 ಕೋಟಿ ಭಾರತೀಯ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿರುವ ಪೊಲೀಸರು, ಮೂವರು ಲಷ್ಕರ್-ಎ-ತೋಯ್ಬಾ ಸಂಘಟನೆಯ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಪಾಕ್ನೊಂದಿಗೆ ನಂಟು ಹೊಂದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಚಕ್ರವರ್ತಿ ತಿಳಿಸಿದ್ದಾರೆ. ಹಂದ್ವಾರ ಪೊಲೀಸರ ಪ್ರಕಾರ, 21 ಕೆಜಿ ಹೆರಾಯಿನ್ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ 100 ಕೋಟಿ ರೂ. ಬೆಲೆ ಬಾಳಲಿದೆಯಂತೆ.
ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ನಿರಂತರವಾಗಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಹಲವು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.