ನವದೆಹಲಿ: ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯ ವೆಬ್‌ಸೈಟ್ ಹ್ಯಾಕ್ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಯ ವಿರುದ್ಧ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಐಕ್ಯಮತ ಸೂಚಿಸಿರುವ ಸೈಬರ್ ಅಪರಾಧಿಗಳು, ಗುರುವಾರ ವಿಶ್ವವಿದ್ಯಾಲಯದ ವೆಬ್‌ಸೈಟ್ ಭಾಗಶಃ ಹ್ಯಾಕ್ ಮಾಡಿದ್ದರಂತೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ವೆಬ್‌ಸೈಟ್ ತೆರೆದರೆ ‘ಜಾಮಿಯಾ ವಿದ್ಯಾರ್ಥಿಗಳನ್ನು ಬೆಂಬಲಿಸಲು ಡಾರ್ಕ್ ನೈಟ್ನಿಂದ ಹ್ಯಾಕ್ ಮಾಡಲಾಗಿದೆ. ಜೈ ಹಿಂದ್!’ ಎಂದು ತೋರಿಸುತ್ತಿತ್ತಂತೆ. ಈ ಕುರಿತು ದೆಹಲಿ ಪೊಲೀಸ್ ಸೈಬರ್ ಘಟಕಕ್ಕೆ ದೂರು ನೀಡಲು ವಿವಿ ಆಡಳಿತ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ದೆಹಲಿ ಪೊಲೀಸ್ ಅಧಿಕಾರಿ ಅನಿಲ್ ಮಿತ್ತಲ್, ವಿಶ್ವವಿದ್ಯಾಲಯದಿಂದ ಯಾವುದೇ ದೂರು ಬಂದಿಲ್ಲ. ನಾವು ದೂರು ಸ್ವೀಕರಿಸಿದ ನಂತರ, ಈ ಬಗ್ಗೆ ಪರಿಶೀಲಿಸುತ್ತೇವೆ ಎಂದಿದ್ದಾರೆ.