ನವದೆಹಲಿ: ಮುಂದಿನ ವಾರ ರಚನೆಯಾಗಲಿರುವ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸಚಿವ ಸಂಪುಟದಲ್ಲಿ ಪವರ್ಫುಲ್ ಖಾತೆಗಳು ಯಾರ ಪಾಲಾಗಲಿವೆ ಎಂದು ರಾಜಕೀಯ ಪಂಡಿತರು ಚರ್ಚೆ ನಡೆಸುತ್ತಿದ್ದಾರೆ.
ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ನೂತನ ಸಚಿವ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಗೃಹಖಾತೆ, ರಕ್ಷಣೆ, ವಿದೇಶಾಂಗ ವ್ಯವಹಾರ ಹಾಗೂ ಹಣಕಾಸು ಖಾತೆಗಳ ಜವಾಬ್ದಾರಿ ಯಾರ ಪಾಲಾಗಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.
ಗುಜರಾತ್ನಲ್ಲಿ ಮೋದಿ ಸಿಎಂ ಆಗಿದ್ದಾಗ ಶಾ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದೇ ಅನುಭವ ಆಧರಿಸಿ ಮೋದಿ 2.0 ಸರ್ಕಾರದಲ್ಲಿ ಗೃಹಖಾತೆ ಪಕ್ಕ ಆಗಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಕಳೆದ ಬಾರಿ ಈ ಖಾತೆ ನಿರ್ವಹಿಸಿದ್ದ ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಲಖನೌ ಕ್ಷೇತ್ರದಿಂದ ಮರು ಆಯ್ಕೆ ಆಗಿದ್ದಾರೆ. ಗೃಹ ಖಾತೆ ಶಾ ವಶವಾದರೆ ರಾಜನಾಥ್ ಅವರಿಗೆ ಯಾವ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ರಫೇಲ್ ಜೆಟ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ತಳ್ಳಿ ಹಾಕುವಲ್ಲಿ ಯಶಸ್ವಿ ಆಗಿರುವ ನಿರ್ಮಲಾ ಸೀತಾರಾಮನ್ ಅವರು, ಈ ಹಿಂದಿನ ರಕ್ಷಣಾ ಖಾತೆಯಲ್ಲಿ ಮುಂದುವರಿಯಲಿದ್ದಾರೆ. ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ರೈಲ್ವೆ ಖಾತೆಯನ್ನು ಚಾಕಚಕ್ಯತೆಯಿಂದ ನಿಭಾಯಿಸಿದ್ದ ಪಿಯೂಷ್ ಗೋಯಲ್ ಇದೇ ಖಾತೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆರೋಗ್ಯ ಸಮಸ್ಯೆಯಿಂದ ಎರಡು ಬಾರಿ ವಿತ್ತ ಖಾತೆಯ ತಾತ್ಕಾಲಿಕ ಜವಾಬ್ದಾರಿಯನ್ನು ಗೋಯಲ್ ಹೆಗಲಿಗೆ ಹೊರಿಸಿ ಸ್ಪರ್ಧೆಯಿಂದ ಹಿಂದೆ ಸರಿದ ಅರುಣ್ ಜೇಟ್ಲಿ ಮತ್ತೆ ಮೋದಿ ಸಂಪುಟ ಸೇರುವುದು ಅನುಮಾನ. ಜೊತೆಗೆ ಚುನಾವಣೆ ಗೆಲುವಿನ ಬಳಿಕ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿರಲಿಲ್ಲ. ಹೀಗಾಗಿ, ಆರೋಗ್ಯ ಸಂಬಂಧ ಜೇಟ್ಲಿ, ಸಂಪುಟದಿಂದ ದೂರ ಉಳಿಯುವ ಸಾಧ್ಯತೆ ದಟ್ಟವಾಗಿದೆ.
ವಿದೇಶಾಂಗ ವ್ಯವಹಾರಗಳ ಖಾತೆ ನಿರ್ವಹಿಸಿದ ಸುಷ್ಮಾ ಸ್ವರಾಜ್ ಸಹ ಸ್ಪರ್ಧೆ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿ, ಅದರಂತೆ ನಡೆದುಕೊಂಡಿದ್ದರು. ಸದ್ಯ ಅವರು ಎರಡೂ ಸಭೆಗಳ ಸದಸ್ಯರಾಗಿ ಉಳಿದಿಲ್ಲ.ಬಿಷೇಕ್ನಲ್ಲಿ ನಡೆದ ಶಾಂಘೈ ಕೋಆಪರೇಷನ್ ಆರ್ಗನೈಜೇಷನ್ ಸಭೆಯಲ್ಲಿ ಕೊನೆಯ ಬಾರಿ ಭಾಗವಹಿಸಿದ್ದರು. ಜೂನ್ 14-15ರಂದು ಬಿಷೇಕ್ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭಾರತದ ಪ್ರಧಾನಿ ಭೇಟಿ ಆಗಬೇಕಿದೆ. ಹೀಗಾಗಿ, ಈ ಖಾತೆಯ ಜವಾಬ್ದಾರಿ ಯಾರಿಗೆ ಸಿಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.