ಪಿಥೋರಾಘರ್ (ಉತ್ತರಾಖಂಡ): ಮೃತ ವ್ಯಕ್ತಿಯ ಶವವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 25 ಕಿ.ಮೀ ದೂರ ಸಾಗಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ, ಮೃತದೇಹವನ್ನು ವ್ಯಕ್ತಿಯ ಕುಟುಂಬಕ್ಕೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪೋನಿ ಆಪರೇಟರ್ (30 ವರ್ಷ) ಎಂಬಾತ ಮೃತಪಟ್ಟ ಮಾಹಿತಿ ತಿಳಿದ ಐಟಿಬಿಪಿಯ 14ನೇ ಬೆಟಾಲಿಯನ್ ಸಿಬ್ಬಂದಿ, ಘಟನಾ ಸ್ಥಳಕ್ಕೆ ಬಂದು ಮೃತ ವ್ಯಕ್ತಿಯ ಶವವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 25 ಕಿ.ಮೀ ನಡೆದುಕೊಂಡು ಬಂದಿದ್ದಾರೆ.
ಬೆಳಗ್ಗೆ 11-30ಕ್ಕೆ ಕಾಲ್ನಡಿಗೆ ಮೂಲಕ ನಡೆಯಲು ಆರಂಭಿಸಿದ ಬೆಟಾಲಿಯನ್ ಸಿಬ್ಬಂದಿ, ಸಂಜೆ 4: 30ರ ಸುಮಾರಿಗೆ ಮೃತನ ಸ್ಥಳವಾದ ಮುನ್ಸಾರಿ ಎಂಬ ಗ್ರಾಮವನ್ನು ತಲುಪಿದ್ದಾರೆ ಎಂದು ಐಟಿಬಿಪಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಪರ್ವತ ಪ್ರದೇಶಗಳ ಕಿರುದಾರಿಯಲ್ಲಿಯೇ ಮೃತದೇಹವನ್ನು ಹೊತ್ತು ತಂದ ಎಂಟು ಮಂದಿ ಐಟಿಬಿಪಿ ಯೋಧರು, ಮಳೆ, ಭೂ ಕುಸಿತವನ್ನು ಲೆಕ್ಕಿಸದೇ 25 ಕಿ.ಮೀ ಸಾಗಿ ಬಂದಿದ್ದಾರೆ. ಮೃತ ದೇಹವನ್ನು ಹಸ್ತಾಂತರಿಸಿದ್ದಕ್ಕೆ ಸ್ಥಳೀಯರು ಯೋಧರಿಗೆ ಸೆಲ್ಯೂಟ್ ಹೇಳಿದ್ದಾರೆ. ಬಾಂಗಪಾಣಿಯಲ್ಲಿ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲಾಗಿದೆ.