ಜೆರುಸಲೇಂ(ಇಸ್ರೇಲ್) : ಇಸ್ರೇಲ್ ಆರೋಗ್ಯ ಮಂತ್ರಿ ಯಾಕೋವ್ ಲಿಟ್ಜ್ಮನ್ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಅವರನ್ನು ಪ್ರತ್ಯೇಕಗೊಳಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಸೋಂಕಿತ ಆರೋಗ್ಯ ಮಂತ್ರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದ ಕಾರಣ ತೀವ್ರ ಆತಂಕ ಸೃಷ್ಟಿಯಾಗಿದೆ. ಆರೋಗ್ಯ ಮಂತ್ರಿಯೊಂದಿಗೆ ಹಿಂದಿನ ಎರಡು ವಾರಗಳಿಂದ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಲಾಗಿದೆ.
ಈ ಹಿಂದೆ ಉನ್ನತಾಧಿಕಾರಿಯೊಬ್ಬರಲ್ಲಿ ಕೊರೊನಾ ದೃಢಪಟ್ಟಿದ್ದರಿಂದ ಪ್ರಧಾನಿ ನೆತನ್ಯಾಹು ಅವರನ್ನು ಕ್ವಾರಂಟೈನ್ನಲ್ಲಿಡಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿದಾಗ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಯಾಕೋವ್ ಲಿಟ್ಜ್ಮನ್ ಇಸ್ರೇಲ್ನಲ್ಲಿ ಅತಿ ದೊಡ್ಡ ಸಮುದಾಯವೊಂದಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಕೊರೊನಾ ಹರಡಿರುವ ಭೀತಿ ಹೆಚ್ಚಾಗಿದೆ. ಈ ಹಿಂದೆ ಸರ್ಕಾರದ ಆದೇಶಗಳನ್ನು ಯಹುದಿಗಳ ಗುರುಗಳು ನಿರ್ಲಕ್ಷಿಸಿದ್ದರು ಎಂಬ ಕಾರಣಕ್ಕೆ ಈಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈಗ ಸದ್ಯಕ್ಕೆ ಕೊರೊನಾ ಇಸ್ರೇಲ್ನಲ್ಲಿ ತುಂಬಾ ವೇಗವಾಗಿ ಹರಡುತ್ತಿದೆ. ಆರು ಸಾವಿರ ಮಂದಿ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. 26 ಮಂದಿ ಈವರೆಗೂ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.