ನವದೆಹಲಿ: ಕೋವಿಡ್ ಸೋಂಕಿನ ಕಾರಣಕ್ಕೆ ಸುಮಾರು ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ಮತ್ತೆ ಸೇವೆಗಳನ್ನು ಆರಂಭಿಸಿದ್ದು, ಸೋಮವಾರದಿಂದ ದೇಶದ 62 ನಿಲ್ದಾಣಗಳಲ್ಲಿ ಇ-ಕ್ಯಾಟರಿಂಗ್ ಸೇವೆ ಪುನಾರಂಭವಾಗಲಿದೆ.
ಐಆರ್ಸಿಟಿಸಿ ಫೆಬ್ರವರಿ 1ರಿಂದ ಮೊದಲ ಹಂತದಲ್ಲಿ 62 ನಿಲ್ದಾಣಗಳಲ್ಲಿ ಇ-ಕ್ಯಾಟರಿಂಗ್ ಸೇವೆಗಳನ್ನು ಪುನಾರಂಭಿಸಲಿದೆ. ಮೂರು ವಾರಗಳ ನಂತರ ಮತ್ತಷ್ಟು ರೈಲ್ವೆ ನಿಲ್ದಾಣಗಳಲ್ಲಿ ಸೇವೆ ಆರಂಭವಾಗಲಿದೆ ಎಂದು ಐಆರ್ಸಿಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ದೇಶದ ಸ್ವಚ್ಛ ನಗರಿ ಇಂದೋರ್ ಹೇಗಾಯ್ತು ಗೊತ್ತಾ? ಯಾವ ರಾಜ್ಯವೂ ಇಷ್ಟು ಸ್ವಚ್ಛವಾಗಬಾರದು!!
ನವದೆಹಲಿ, ಭೋಪಾಲ್, ಅಹಮದಾಬಾದ್, ಹೌರಾ, ಸೂರತ್, ವಿಜಯವಾಡ, ಪಾಟ್ನಾ, ಉಜ್ಜಯಿನಿ, ಪನ್ವೆಲ್ ಇ-ಕ್ಯಾಟರಿಂಗ್ ಸೇವೆ ಆರಂಭಿಸುವ ಪ್ರಮುಖ ನಿಲ್ದಾಣಗಳಾಗಿದ್ದು, ಮೂರು ವಾರಗಳ ನಂತರ ಇನ್ನಷ್ಟು ನಗರಗಳಲ್ಲಿ ಸೇವೆ ಆರಂಭವಾಗಲಿದೆ.
ಕೋವಿಡ್ ಸೋಂಕಿನ ಕಾರಣದಿಂದ ದೇಶಾದ್ಯಂತ ಲಾಕ್ಡೌನ್ ಹೇರಲಾಗಿತ್ತು. ಮಾರ್ಚ್ 22, 2020ರಂದು ರೈಲ್ವೆ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಕ್ಯಾಟರಿಂಗ್ ಸೇವೆ ಆರಂಭವಾಗಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.