ವಾಷಿಂಗ್ಟನ್(ಅಮೆರಿಕ): ಟೆಹ್ರಾನ್ ಬಳಿ ಮಂಗಳವಾರ ತಡರಾತ್ರಿ ನೆಲಕ್ಕಪ್ಪಳಿಸಿದ ಉಕ್ರೇನಿಯನ್ ಜೆಟ್ಲೈನರ್ನನ್ನು ಇರಾನ್ ಹೊಡೆದುರುಳಿಸಿದೆ ಎಂದು ಪಾಶ್ಚಾತ್ಯ ನಾಯಕರು ಆರೋಪಿಸಿದ್ದಾರೆ.
ಈ ವಿಮಾನದಲ್ಲಿದ್ದ 176 ಪ್ರಯಾಣಿಕರು ಸಜೀವ ದಹನವಾಗಿದ್ದರು. ಈ ಘಟನೆಗೆ ಇರಾನ್ ಹಾರಿಸಿದ ಕ್ಷಿಪಣಿಯೇ ಕಾರಣವೆಂದು ಯುಎಸ್, ಕೆನಡಿಯನ್ ಮತ್ತು ಬ್ರಿಟಿಷ್ ಅಧಿಕಾರಿಗಳು ಘೋಷಿಸಿದ್ದಾರೆ. ಇರಾಕ್ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಹಾರಿಸಿದ್ದ ಕ್ಷಿಪಣಿಗಳ ಪೈಕಿ ಒಂದು ಆಕಸ್ಮಿಕವಾಗಿ ಈ ವಿಮಾನಕ್ಕೆ ತಾಕಿದ ಪರಿಣಾಮ ಈ ಘಟನೆ ಜರುಗಿದೆ ಎಂದು ನಾಯಕರು ಹೇಳಿದ್ದಾರೆ.
ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಹತ್ಯೆಯನ್ನು ಅಮೆರಿಕ ಸೇನೆ ನಡೆಸಿತ್ತು. ಇದರ ಪರಿಣಾಮ ಕಳೆದ ಒಂದು ವಾರದಿಂದ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಇರಾನ್ ದೇಶವು ಅಮೆರಿಕದ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.
ಈ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮಾತನಾಡಿ, ನಮ್ಮ ದೇಶ ಕನಿಷ್ಠ 63 ನಾಗರಿಕರನ್ನು ಕಳೆದುಕೊಂಡಿದೆ. ನಮಗೆ ಸಿಕ್ಕಿರುವ ಗುಪ್ತಚರ ಮಾಹಿತಿ ಪ್ರಕಾರ ಇರಾನ್ ನಡೆಸಿರುವ ಕ್ಷಿಪಣಿ ದಾಳಿಯೇ ಈ ಘಟನೆ ಜರುಗಲು ಕಾರಣ ಹಾಗೂ ಅನೇಕ ಪುರಾವೆಗಳು ದೊರೆತಿವೆ ಎಂದು ಒಟ್ಟಾವಾದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಇದೇ ವೇಳೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ ಈ ಘಟನೆಗೆ ಇರಾನ್ ಕಾರಣವೇ ಹೊರತು, ವಿಮಾನದಲ್ಲಿನ ತಾಂತ್ರಿಕ ದೋಷವಲ್ಲ ಎಂದಿದ್ದರು. ಆದ್ರೆ ಇರಾನ್ ಈ ಆರೋಪವನ್ನು ತಳ್ಳಿಹಾಕಿದೆ.