ಕೋಲ್ಕತ್ತಾ: ಮುಂದಿನ ವರ್ಷ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ನಿನ್ನೆ ಕೋಲ್ಕತ್ತಾದಲ್ಲಿ ನಡೆದಿದೆ. ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನಲ್ಲಿ ಪಡೆಯುವ ಮೂಲಕ ತಮ್ಮ ತಂಡಗಳನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತಿವೆ.
2019ರಲ್ಲಿ ಬರೋಬ್ಬರಿ 8.4ಕೋಟಿ ರೂಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದ ಸೌರಾಷ್ಟ್ರದ ಎಡಗೈ ವೇಗಿ ಜಯದೇವ್ ಉನಾದ್ಕತ್ ಇದೀಗ ಮತ್ತೊಮ್ಮೆ ಅದೇ ಫ್ರಾಂಚೈಸಿ ತೆಕ್ಕೆಗೆ ಸೇರಿಕೊಂಡಿದ್ದು, ನಿನ್ನೆಯ ಬಿಡ್ಡಿಂಗ್ನಲ್ಲಿ 3 ಕೋಟಿ ರೂಗೆ ಬಿಕರಿಯಾದರು.
ಮೂಲ ಬೆಲೆ 1 ಕೋಟಿ ರೂ ಹೊಂದಿದ್ದ ಉನಾದ್ಕತ್ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯಿತು. ಆದರೆ ರಾಜಸ್ಥಾನ ರಾಯಲ್ಸ್ ತಂಡ ಅವರನ್ನು 3 ಕೋಟಿ ರೂ ನೀಡಿ ಮತ್ತೊಮ್ಮೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ಐಪಿಎಲ್ನಲ್ಲಿ ಒಟ್ಟು 9 ಸಲ ಹರಾಜಾದ ಆಟಗಾರರಾಗಿದ್ದಾರೆ ಉನಾದ್ಕತ್.
ಯಾವ ವರ್ಷ ಉನಾದ್ಕತ್ ಸೇಲ್?
- 2011- ಕೋಲ್ಕತ್ತಾ ನೈಟ್ ರೈಡರ್ಸ್ (2.50 ಲಕ್ಷ)
- 2013- ರಾಯಲ್ ಚಾಲೆಂಜರ್ಸ್ ಬೆಂಗಳೂರು (5.25 ಲಕ್ಷ)
- 2014- ಡೆಲ್ಲಿ ಡೇರ್ ಡೆವಿಲ್ಸ್ (2.8 ಕೋಟಿ)
- 2015- ಡೆಲ್ಲಿ ಡೇರ್ ಡೆವಿಲ್ಸ್(1.1ಕೋಟಿ)
- 2016-ಕೋಲ್ಕತ್ತಾ ನೈಟ್ ರೈಡರ್ಸ್ (1.6ಕೋಟಿ)
- 2017-ರೈಸಿಂಗ್ ಪುಣೆ ಸೂಪರ್ಜೈಂಟ್ಸ್ (30 ಲಕ್ಷ)
- 2018- ರಾಜಸ್ಥಾನ ರಾಯಲ್ಸ್ (11.5ಕೋಟಿ)
- 2019-ರಾಜಸ್ಥಾನ ರಾಯಲ್ಸ್ (8.4ಕೋಟಿ)
- 2020- ರಾಜಸ್ಥಾನ ರಾಯಲ್ಸ್ (3ಕೋಟಿ)
ಇಲ್ಲಿಯವರೆಗೆ ಐದು ತಂಡಗಳಲ್ಲಿ ಐಪಿಎಲ್ ಪಂದ್ಯಗಳನ್ನಾಡಿರುವ ಉನಾದ್ಕತ್ ಒಟ್ಟು 73 ಪಂದ್ಯಗಳಿಂದ 77 ವಿಕೆಟ್ ಪಡೆದಿದ್ದು, 2018ರಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 11.50 ಕೋಟಿ ರೂ ನೀಡಿ ಖರೀದಿಸಿತ್ತು. ಇದಾದ ಬಳಿಕ 2019ರಲ್ಲಿ ಅದೇ ತಂಡದ ಪಾಲಾಗಿದ್ದ ಉನಾದ್ಕತ್ 8.48 ಕೋಟಿ ರೂಗೆ ಮಾರಾಟವಾಗಿದ್ದರು.