ನವದೆಹಲಿ : ನಿತ್ಯಾನಂದ ಬಗ್ಗೆ ಮಾಹಿತಿ ಕೋರಿ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪರಾಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಬಗ್ಗೆ ಅದರ ಸದಸ್ಯ ರಾಷ್ಟ್ರಗಳಿಂದ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ಅಂತಾರಾಷ್ಟ್ರೀಯ ಪೊಲೀಸ್ ಸಹಕಾರ ಸಂಸ್ಥೆಯಿಂದ ಬ್ಲೂ ಕಾರ್ನರ್ ನೋಟಿಸ್ ನೀಡಲಾಗುತ್ತದೆ.
ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೋರಿ ಗುಜರಾತ್ ಪೊಲೀಸರು ಭಾರತದ ಇಂಟರ್‌ಪೋಲ್ ವಿಷಯಗಳಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಸಿಬಿಐಗೆ ಮನವಿ ಕಳುಹಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಜಾಗತಿಕ ಬಂಧನ ವಾರಂಟ್‌ನ ರೆಡ್ ಕಾರ್ನರ್ ನೋಟಿಸ್ ನೀಡಲು ಇಂಟರ್‌ಪೋಲ್ ಮಾಹಿತಿ ಕೇಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಆತನ ಆಶ್ರಮದಿಂದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದರಿಂದ ಗುಜರಾತ್ ಪೊಲೀಸರು ನಿತ್ಯಾನಂದನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ತನ್ನ ಆಶ್ರಮವನ್ನು ನಡೆಸಲು ಅನುಯಾಯಿಗಳಿಂದ ದೇಣಿಗೆ ಸಂಗ್ರಹಿಸಲು ಮಕ್ಕಳನ್ನು ಅಪಹರಿಸಿ ಮತ್ತು ಬಂಧಿಸಿದ ಆರೋಪ ನಿತ್ಯಾನಂದನ ಮೇಲಿತ್ತು. ಇದೇ ಆರೋಪದ ಮೇರೆಗೆ ತನಿಖೆ ಕೈಗೊಂಡಿದ್ದ ಗುಜರಾತ್ ಪೊಲೀಸರು, ನಿತ್ಯಾನಂದನ ಆಶ್ರಮವನ್ನು ನೆಲಸಮಗೊಳಿಸಿದ್ದರು.