ಹೈದರಾಬಾದ್ : ಯುಎನ್ ಜನರಲ್ ಅಸೆಂಬ್ಲಿ ಸೆಪ್ಟೆಂಬರ್ 7ರಂದು ನೀಲಿ ಆಕಾಶಕ್ಕಾಗಿ ಅಂತಾರಾಷ್ಟ್ರೀಯ ಶುದ್ಧ ಗಾಳಿಯ ದಿನವೆಂದು ಗೊತ್ತುಪಡಿಸಿದೆ. ಇಂದು ಈ ದಿನವನ್ನು ಮೊದಲ ಬಾರಿಗೆ ಆಚರಿಸಲಾಗುತ್ತಿದೆ.
ವಾಯುಮಾಲಿನ್ಯದ ಕುರಿತು ಜಾಗೃತಿ ಮೂಡಿಸುವುದು ಮತ್ತು ವಾಯುಮಾಲಿನ್ಯದಿಂದಾಗುವ ಸಮಸ್ಯೆ ಪರಿಹರಿಸುವುದು ಈ ದಿನದ ಉದ್ದೇಶ. ವಾಯುಮಾಲಿನ್ಯ ಪರಿಸರದ ಜೊತೆಗೆ ಮಾನವನ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ. ಪ್ರಪಂಚದಾದ್ಯಂತ ಅಂದಾಜು 6.5 ದಶಲಕ್ಷ ಸಾವು ವಾಯುಮಾಲಿನ್ಯದಿಂದಾಗಿ ಸಂಭವಿಸುತ್ತಿವೆ.
ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಾಯುಮಾಲಿನ್ಯವು ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ವಾಯುಮಾಲಿನ್ಯದಿಂದ ಜೀವಿತಾವಧಿಯ 5.2 ವರ್ಷ ಕಡಿತ : ಭಾರತದಲ್ಲಿನ ವಾಯು ಮಾಲಿನ್ಯದ ಮಟ್ಟವು ಸರಾಸರಿ ಭಾರತೀಯನ ಜೀವಿತಾವಧಿಯನ್ನು 5.2 ವರ್ಷಗಳಷ್ಟು ಕಡಿಮೆಗೊಳಿಸುತ್ತಿದೆ ಎಂದು ಚಿಕಾಗೊ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆಯ ಮೌಲ್ಯಮಾಪನದ ವರದಿಯೊಂದು ತಿಳಿಸಿದೆ. 2016 ಮತ್ತು 2018ರ ನಡುವೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ ಎಂದು ಈ ವರದಿ ತಿಳಿಸಿದೆ.
ವಿಶ್ವದ 5ನೇ ಅತಿ ಹೆಚ್ಚು ಕಲುಷಿತ ದೇಶ ಭಾರತ : ಭಾರತವು 2019ರಲ್ಲಿ ಹೆಚ್ಚು ಕಲುಷಿತ ರಾಷ್ಟ್ರಗಳ ಪೈಕಿ 5ನೇ ಸ್ಥಾನದಲ್ಲಿದೆ. ವಾಯು ಶುದ್ಧೀಕರಣದ ಕುರಿತು ಕೆಲಸ ಮಾಡುತ್ತಿರುವ ಐಕ್ಯೂಏರ್ ಎಂಬ ಕಂಪನಿಯ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿಯ ಗಾಜಿಯಾಬಾದ್ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಸ್ಥಾನ ಪಡೆದಿದೆ.
ವಿಶ್ವದ ಅತಿ ಹೆಚ್ಚು ಕಲುಷಿತ ರಾಷ್ಟ್ರಗಳು :
- ಬಾಂಗ್ಲಾದೇಶ
- ಪಾಕಿಸ್ತಾನ
- ಮಂಗೋಲಿಯಾ
- ಆಫ್ಘಾನಿಸ್ತಾನ
- ಭಾರತ
ಲಾಕ್ಡೌನ್ನಿಂದ ಸುಧಾರಿಸಿದ ಗಾಳಿಯ ಗುಣಮಟ್ಟ : ಕೋವಿಡ್-19 ಹಿನ್ನೆಲೆ ವಿಧಿಸಿದ ಲಾಕ್ಡೌನ್ ಪರಿಣಾಮವಾಗಿ ಭಾರತ ಹಾಗೂ ವಿಶ್ವಾದ್ಯಂತ ವಾಯುಮಾಲಿನ್ಯ ಕಡಿಮೆಯಾಗಿದ್ದು, ಗಾಳಿಯ ಗುಣಮಟ್ಟ ವೃದ್ಧಿಸಿದೆ.
ಚೆನ್ನೈ,ದೆಹಲಿ, ಹೈದರಾಬಾದ್, ಕೋಲ್ಕತಾ ಮತ್ತು ಮುಂಬೈನಲ್ಲಿ ಅಪಾಯಕಾರಿ ವಾಯು ಮಾಲಿನ್ಯಕಾರಕಗಳು ಶೇ.54ರಷ್ಟು ಕಡಿಮೆಯಾಗಿವೆ ಎಂದು ಸಸ್ಟೈನಬಲ್ ಸಿಟೀಸ್ ಮತ್ತು ಸೊಸೈಟಿ ಪ್ರಕಟಿಸಿದ ಈ ಇತ್ತೀಚಿನ ಅಧ್ಯಯನ ತಿಳಿಸಿದೆ.
ಈ ಕ್ರಮಗಳಿಂದ ಗಾಳಿಯ ಗುಣಮಟ್ಟ ಸುಧಾರಣೆ : ಕೈಗಾರಿಕೆಗಳಿಂದ ತ್ಯಾಜ್ಯ ಹೊರಬಿಡುವಾಗ ಸರ್ಕಾರದ ಮಾನದಂಡಗಳನ್ನು ಅನುಸರಿಸುವುದು.
- ಕೃಷಿ ಮಾಡಿ ಬೆಳೆ ಕಟಾವಿನ ಬಳಿಕ ಉಳಿಯುವ ಉಳಿಕೆಗಳನ್ನು ಸುಡದಿರುವುದು.
- ಹೈಡ್ರೋಫ್ಲೋರೊಕಾರ್ಬನ್ (ಹೆಚ್‌ಎಫ್‌ಸಿ) ಬಳಕೆ ಮಾಡದಿರುವುದು.
- ವಿದ್ಯುತ್ ಉತ್ಪಾದನೆಗೆ ಗಾಳಿ, ಸೌರ ಮತ್ತು ಜಲಶಕ್ತಿಯ ಬಳಕೆಗೆ ಪ್ರೋತ್ಸಾಹ ನೀಡುವುದು.
- ವಸತಿ ತ್ಯಾಜ್ಯವನ್ನು ಮುಕ್ತವಾಗಿ ಸುಡುವುದನ್ನು ನಿಷೇಧಿಸುವುದು.
- ಗಣಿಗಾರಿಕೆ ಸಂದರ್ಭದಲ್ಲಿ ಸರ್ಕಾರದ ಮಾನದಂಡಗಳನ್ನು ಅನುಸರಿಸುವುದು.
- ಖಾಸಗಿ ವಾಹನಗಳಿಂದ ಸಾರ್ವಜನಿಕ ಸಾರಿಗೆಯಲ್ಲಿ ಹೆಚ್ಚು ಪ್ರಯಾಣಿಸುವುದು.