ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ಶ್ರೀ ರಾಮ ಮಂದಿರ ಭೂಮಿ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಉಗ್ರರ ಸಂಭಾವ್ಯ ದಾಳಿಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಸಂಘಟನೆಯ ಭಯೋತ್ಪಾದಕರು ದಾಳಿ ನಡೆಸಬಹುದು ಎಂದು ಭಾರತೀಯ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ (RAW) ಮಾಹಿತಿ ನೀಡಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ರಾಮ ಜನ್ಮಭೂಮಿ ಅಥವಾ ಅದರ ಸುತ್ತಲಿನ ಪ್ರದೇಶದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ರೂಪಿಸಿಕೊಳ್ಳುತ್ತಿದೆ. ಅಫ್ಘಾನಿಸ್ತಾನದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಭಯೋತ್ಪಾದಕರಿಗೆ ಐಎಸ್ಐ ಈ ನಿಟ್ಟಿನಲ್ಲಿ ವಿಶೇಷ ತರಬೇತಿ ನೀಡಿದ್ದು, ಐಎಸ್ಐ ಮೂರರಿಂದ ನಾಲ್ವರು ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿದೆ ಎಂದು ತಿಳಿಸಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಉಗ್ರರು ದಾಳಿ ನಡೆಸುವ ಸಾಧ್ಯತೆಯನ್ನೂ ಗುಪ್ತಚರ ವಿಭಾಗ ತಿಳಿಸಿದೆ.
ಮೂಲಗಳ ಪ್ರಕಾರ, ಅಯೋಧ್ಯೆ, ದೆಹಲಿ ಮತ್ತು ಕಾಶ್ಮೀರದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ಇಡಲು ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಜುಲೈ 26ರಂದು ಜಮ್ಮು-ಕಾಶ್ಮೀರದ ಶೋಫಿಯಾನ್ದಲ್ಲಿ ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದ ಯೋಧರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಆಗಸ್ಟ್ 5ರಂದು ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡಲಿದ್ದು, ಭೂಮಿ ಪೂಜೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ವಿಶೇಷವೆಂದರೆ, ಆಗಸ್ಟ್ 5ರಂದು ಜಮ್ಮುಕಾಶ್ಮೀರಕ್ಕೆ ನೀಡಿದ ವಿಶೇಷ ಸಾಂವಿಧಾನಿಕ ಪ್ರಾತಿನಿಧ್ಯ ರದ್ದುಗೊಳಿಸಿ ಒಂದು ವರ್ಷ ಪೂರ್ಣಗೊಳ್ಳಲಿದೆ.