ಬೆಂಗಳೂರು: ದೇಶದ ಅಗ್ರಮಾನ್ಯ ಸಾಫ್ಟ್ವೇರ್ ಸಂಸ್ಥೆ ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಮಗನ ಮದುವೆ ಡಿಸೆಂಬರ್ 2ರಂದು ನಡೆಯಲಿದ್ದು, ಸರಳವಾಗಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ಇನ್ಫಿ ಸಂಸ್ಥೆಯ ದಂಪತಿ ಮಗ ರೋಹನ್ ಮೂರ್ತಿ ಕೇರಳದ ಅರ್ಪಣಾ ಕೃಷ್ಣನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇವರ ಮದುವೆ ಬೆಂಗಳೂರಿನ ಹೋಟೆಲ್ವೊಂದರಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ.
ಕಳೆದ ಮೂರು ವರ್ಷಗಳಿಂದ ಪರಿಚಯವಾಗಿರುವ ಇವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಅರ್ಪಣಾ ನಿವೃತ್ತ ಎಸ್ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್, ಮಾಜಿ ಕಮಾಂಡರ್ ಮಗಳು. ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2013ರಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು.