ಅಯೋಧ್ಯೆ (ಉತ್ತರ ಪ್ರದೆಶ): ಇಂಡೋ - ಚೀನಾ ಗಡಿ ವಿವಾದದ ಮಧ್ಯೆ, ರಾಮ ಮಂದಿರ ಟ್ರಸ್ಟ್ ಅಯೋಧ್ಯೆಯಲ್ಲಿ ದೇವಾಲಯದ ನಿರ್ಮಾಣ ಪ್ರಾರಂಭಿಸುವ ಯೋಜನೆ ತಡೆ ಹಿಡಿದಿದೆ.
ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾರತೀಯ ಸೈನಿಕರ ಹತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಟ್ರಸ್ಟ್, ಶೀಘ್ರದಲ್ಲೇ ಹೊಸ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ಹೇಳಿದೆ.
"ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸುವ ನಿರ್ಧಾರವನ್ನು ದೇಶದ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುವುದು ಮತ್ತು ಅಧಿಕೃತವಾಗಿ ಘೋಷಿಸಲಾಗುವುದು" ಎಂದು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಹೇಳಿದರು.
ಭಾರತ - ಚೀನಾ ಗಡಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ದೇಶವನ್ನು ರಕ್ಷಿಸುವುದು ಅತ್ಯಂತ ಮುಖ್ಯ ಎಂದು ಟ್ರಸ್ಟ್ ಹೇಳಿದೆ. ಇದೇ ವೇಳೆ ಟ್ರಸ್ಟ್ನಿಂದ ಸೈನಿಕರಿಗೆ ಗೌರವ ಸಲ್ಲಿಸಲಾಯಿತು.