ನವದೆಹಲಿ: ಭಾರತ ಹಾಗೂ ಚೀನಾ ದೇಶಗಳ ಮಧ್ಯೆ ಸಂಘರ್ಷ ಉಲ್ಬಣಿಸಿದ ಬೆನ್ನಲ್ಲೇ ಭಾರತದಲ್ಲಿ ಚೀನಾ ವಸ್ತುಗಳ ಮೇಲೆ ಬಹಿಷ್ಕಾರ ಹಾಕುವ ಅಭಿಯಾನ ಜೋರು ಪಡೆಯತೊಡಗಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಚೀನಾ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದು ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಎಂಬುದನ್ನು ಕೂಡ ಚಿಂತಿಸಬೇಕಿದೆ.
ಭಾರತ-ಚೀನಾಗಳ ಮಧ್ಯೆ ಈಗಾಗಲೇ ಬೇರೂರಿರುವ ದ್ವಿಪಕ್ಷೀಯ ವ್ಯಾಪಾರ ಮತ್ತು ಚೀನಾ ವಸ್ತು ಹಾಗೂ ಬಂಡವಾಳಗಳನ್ನು ಭಾರತೀಯ ಗ್ರಾಹಕರು ಮತ್ತು ಕಂಪನಿಗಳು ಅವಲಂಬಿಸಿರುವುದರಿಂದ ಬಹಿಷ್ಕಾರ ಜಾರಿಗೆ ತರುವುದು ಹೇಳಿದಷ್ಟು ಸುಲಭವಲ್ಲ ಎಂಬುದು ಕಂಡು ಬರುತ್ತದೆ.
ಈಟಿವಿ ಭಾರತ್ ಬಳಿ ಇರುವ ಸರ್ಕಾರಿ ಅಂಕಿಸಂಖ್ಯೆಗಳನ್ನು ನೋಡಿದಲ್ಲಿ, ರಸಗೊಬ್ಬರಗಳಿಗಾಗಿಯೂ ಭಾರತ ಚೀನಾವನ್ನು ಅವಲಂಬಿಸಿರುವುದು ಗೊತ್ತಾಗುತ್ತದೆ. ಭಾರತ ವಿವಿಧ ದೇಶಗಳಿಂದ ಡೈಅಮೋನಿಯಂ ಫಾಸ್ಫೇಟ್ (ಡಿಎಪಿ), ಮ್ಯುರಿಯೇಟ್ ಪೊಟ್ಯಾಷ್ (ಎಂಓಪಿ), ನೈಟ್ರೊಜನ್ ಫಾಸ್ಫೇಟ್ ಮತ್ತು ಪೊಟ್ಯಾಷ್ ಕಂಪೋಸಿಶನ್ ರಾಸಾಯನಿಕಗಳು ಸೇರಿದಂತೆ ಇನ್ನೂ ಹಲವಾರು ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಇದರಲ್ಲಿ ಚೀನಾದ್ದೇ ಸಿಂಹಪಾಲು!
2016-17 ರಲ್ಲಿ 21.76 ಲಕ್ಷ ಮೆಟ್ರಿಕ್ ಟನ್ ಡಿಎಪಿ, 0.28 ಎನ್ಪಿಕೆ ಗಳನ್ನು ಭಾರತ ಚೀನಾದಿಂದ ತರಿಸಿಕೊಂಡಿದೆ. 2017-18 ರಲ್ಲಿ ಚೀನಾ 18.94 ಲಕ್ಷ ಮೆಟ್ರಿಕ್ ಟನ್ ಡಿಎಪಿ, 0.59 ಎನ್ಪಿಕೆ ಮತ್ತು 2018-19 ರಲ್ಲಿ ಚೀನಾ 31.01 ಲಕ್ಷ ಮೆಟ್ರಿಕ್ ಟನ್ ಡಿಎಪಿ ಮತ್ತು 0.24 ಎಂಓಪಿ ಗಳನ್ನು ಭಾರತಕ್ಕೆ ರಫ್ತು ಮಾಡಿದೆ.
ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅಖಿಲ ಭಾರತ ರೈತರ ಒಕ್ಕೂಟದ ರಾಷ್ಟ್ರೀಯ ಸಂಯೋಜಕ ರಾಜಾ ರಾಮ ತ್ರಿಪಾಠಿ, ಚೀನಾ ರಾಸಾಯನಿಕ ಗೊಬ್ಬರಗಳು ಅಗ್ಗದರದಲ್ಲಿ ದೊರೆಯುವುದರಿಂದ ಹಾಗೂ ಯಾವುದೇ ಅಡೆತಡೆಯಿಲ್ಲದೆ ಭಾರತಕ್ಕೆ ಸಾಗಣೆಯಾಗುವುದರಿಂದ ಭಾರತ ಅವನ್ನು ಹೆಚ್ಚಾಗಿ ಅವಲಂಬಿಸಿದೆ ಎಂದು ಹೇಳಿದರು.
ಚೀನಾ ಹೊರತುಪಡಿಸಿದರೆ ಸೌದಿ ಅರೇಬಿಯಾ ಅತಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಭಾರತಕ್ಕೆ ರಫ್ತು ಮಾಡುತ್ತದೆ. ಸೌದಿ ಅರೇಬಿಯಾ 2016-17 ರಲ್ಲಿ 11.90 ಲಕ್ಷ ಮೆಟ್ರಿಕ್ ಟನ್ ಡಿಎಪಿ, 2017-18 ರಲ್ಲಿ 13.18 ಲಕ್ಷ ಮೆಟ್ರಿಕ್ ಟನ್ ಡಿಎಪಿ, 2018-19 ರಲ್ಲಿ 22.02 ಲಕ್ಷ ಮೆಟ್ರಿಕ್ ಟನ್ ಡಿಎಪಿ ಗೊಬ್ಬರವನ್ನು ಭಾರತಕ್ಕೆ ರಫ್ತು ಮಾಡಿದೆ.
ಇನ್ನುಳಿದಂತೆ ಕೆನಡಾ, ಬೆಲಾರುಸ್, ಜರ್ಮನಿ, ಲಿಥುವಾನಿಯಾ, ರಷ್ಯಾ, ಅಮೆರಿಕಗಳು ಕೂಡ ಭಾರತಕ್ಕೆ ಗಣನೀಯ ಪ್ರಮಾಣದಲ್ಲಿ ಗೊಬ್ಬರ ರಫ್ತು ಮಾಡುತ್ತವೆ.
ಇಂಥ ಪರಿಸ್ಥಿತಿಯಲ್ಲಿ ಮೊದಲಿಗೆ ಭಾರತ ಬೃಹತ್ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ತಯಾರಿಸುವ ಕಾರ್ಖಾನೆಗಳನ್ನು ಆರಂಭಿಸಬೇಕಿದೆ. ಆದರೆ ಸರಕಾರಿ ಲೈಸನ್ಸ್ ರಾಜ್ ಹಾಗೂ ಅಧಿಕಾರಿಗಳ ಭ್ರಷ್ಟಾಚಾರದಿಂದ ಹೊಸ ಕಾರ್ಖಾನೆಗಳನ್ನು ಇಲ್ಲಿ ಆರಂಭಿಸುವುದು ಕಷ್ಟಕರವಾಗಿದೆ ಎನ್ನುತ್ತಾರೆ ತ್ರಿಪಾಠಿ.