ನವದೆಹಲಿ: 2020 ರ ಮಧ್ಯಭಾಗದಲ್ಲಿ ಭಾರತದ ತೈಲ ಬೇಡಿಕೆಯು ಚೀನಾವನ್ನು ಹಿಂದಿಕ್ಕಲಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ತಿಳಿಸಿದ್ದು, ಜಗತ್ತಿನ ಮೂರನೇ ಅತಿದೊಡ್ಡ ತೈಲ ಬಳಕೆದಾರ ರಾಷ್ಟ್ರವಾದ ಭಾರತಕ್ಕೆ ಕಾರ್ಯತಂತ್ರ ಅಗತ್ಯತೆಗಾಗಿ ತೈಲ ಸಂಗ್ರಹಣೆಯ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಸೂಚಿಸಿದೆ.
ಕಾರ್ಯತಂತ್ರ ಅಗತ್ಯತೆಗಾಗಿ ಭಾರತವು ಪ್ರಸ್ತುತ ತೈಲ ಸಂಗ್ರಹಕ್ಕಾಗಿ 10 ದಿನಗಳ ಆಮದು ಪ್ರಕ್ರಿಯೆ ಪಾಲಿಸುತ್ತಿದ್ದು, ಮಳೆಗಾಲದ ದಿನಗಳಲ್ಲಿ ಇದು ಸಾಕಾಗುವುದಿಲ್ಲ. ಅಮೆರಿಕ ಹಾಗೂ ಚೀನಾ ಬಳಿಕ ಭಾರತ ಅತಿದೊಡ್ಡ ತೈಲ ಬಳಕೆದಾರ ರಾಷ್ಟ್ರವಾಗಿದ್ದು, ಮುಂದಿನ ದಿನಗಳಲ್ಲಿ ಅಡುಗೆ ಇಂಧನ ಮತ್ತು ಪೆಟ್ರೋಕೆಮಿಕಲ್ ಉದ್ಯಮಕ್ಕಾಗಿ ತನ್ನ ತೈಲ ಬೇಡಿಕೆ ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುತ್ತದೆ ಎಂದು ಐಇಎ ಕಾರ್ಯನಿರ್ವಾಹಕ ನಿರ್ದೇಶಕ ಫಾತಿಹ್ ಬಿರೋಲ್ ತಿಳಿಸಿದ್ದಾರೆ.
2017 ರಲ್ಲಿ 4.4 ಮಿಲಿಯನ್ ಬಿಪಿಡಿಯಿದ್ದ ಭಾರತದ ತೈಲ ಬೇಡಿಕೆ, 2024 ರ ವೇಳೆಗೆ ದಿನಕ್ಕೆ 6 ಮಿಲಿಯನ್ ಬ್ಯಾರೆಲ್‌ಗಳನ್ನು (ಬಿಪಿಡಿ) ತಲುಪಲಿದೆ ಎಂದು ಐಇಎ ಅಂದಾಜಿಸಿದೆ. ಹೀಗಾಗಿ ಭಾರತದ ತೈಲ ಬಳಕೆಯ ಬೆಳವಣಿಗೆಯ ದರವು 2020 ರ ಮಧ್ಯಭಾಗದಲ್ಲಿ ಚೀನಾವನ್ನು ಹಿಂದಿಕ್ಕುವ ನಿರೀಕ್ಷೆಯಿದ್ದು, ಇದು ಭಾರತವನ್ನು ಸಂಸ್ಕರಣಾ ಹೂಡಿಕೆಗೆ ಅತ್ಯಂತ ಆಕರ್ಷಕ ಮಾರುಕಟ್ಟೆಯನ್ನಾಗಿ ಮಾಡುತ್ತದೆ ಎಂದು ಐಇಎ ಬಿಡುಗಡೆ ಮಾಡಿದ 'ಇಂಡಿಯಾ 2020 ಎನರ್ಜಿ ಪಾಲಿಸಿ ರಿವ್ಯೂ'ನಲ್ಲಿ ಉಲ್ಲೇಖಿಸಲಾಗಿದೆ.