ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 47, 703 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದು ಈ ವರೆಗಿನ ಅಧಿಕ ಪ್ರಕರಣಗಳ ದಾಖಲೆಯಾಗಿದೆ. ನಿತ್ಯವೂ ವಿಶ್ವದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ನಡುವೆ ಮಂಗಳವಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 15 ಲಕ್ಷದ ಗಡಿಗೆ ಬಂದು ನಿಂತಿದೆ.
ಆದರೆ ಖುಷಿಯ ವಿಚಾರ ಎಂದರೆ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗಿದ್ದು, ಅದೀಗ ಶೇ 64 ರಷ್ಟಿದೆ. ಈ ಅಂಕಿ- ಅಂಶ ರೋಗಿಗಳನ್ನು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.
ಚೇತರಿಕೆ ಪ್ರಮಾಣ ಶೇ. 64 ರಷ್ಟು :
ಮಂಗಳವಾರದ ಸಂಜೆಯ ಅಂಕಿ - ಅಂಶದ ಪ್ರಕಾರ 14,83,157 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, 4,96,988 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಇದುವರೆಗೂ 9,52,744 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿ ಮನೆಗಳಿಗೆ ತೆರಳಿದ್ದಾರೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 654 ಸಾವುಗಳು ಸಂಭವಿಸಿದ್ದು, ದೇಶದಲ್ಲಿ ಒಟ್ಟು ಮೃತರ ಸಂಖ್ಯೆ 33,425 ಕ್ಕೆ ಏರಿಕೆ ಕಂಡಿದೆ.
ಮಹಾರಾಷ್ಟ್ರದಲ್ಲಿ ಹೇಗಿದೆ ಪರಿಸ್ಥಿತಿ :
3,91,440 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಅತಿಹೆಚ್ಚು ಸೋಂಕಿತರು ಇರುವ ರಾಜ್ಯವಾಗಿದೆ. ಮಹಾರಾಷ್ಟ್ರದಲ್ಲಿ ಮಂಗಳವಾರ 7,717 ಹೊಸ ಕೇಸ್ಗಳು ಪತ್ತೆಯಾಗಿವೆ. 1,44,694 ಸಕ್ರಿಯ ಪ್ರಕರಣಳಿದ್ದು, ಇದುವರೆಗೂ 2,32,277 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸಾವಿನ ಸಂಖ್ಯೆ 14,165 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
2ನೇ ಸ್ಥಾನದಲ್ಲಿ ಮುಂದುವರಿದ ತಮಿಳುನಾಡು:
ಇನ್ನು ತಮಿಳುನಾಡು ಎರಡನೇ ಹೆಚ್ಚು ಕೋವಿಡ್ ಸೋಂಕಿತರನ್ನ ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಸುಮಾರು 2,27,688 ಮಂದಿ ಕೊರೊನಾ ಸೋಂಕಿತರಿದ್ದಾರೆ. ನಿನ್ನೆ ಒಂದೇ ದಿನ 6,972 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ 88 ಸಾವುಗಳು ಸಂಭವಿಸಿವೆ. ಒಟ್ಟಾರೆ ಸಾವಿನ ಸಂಖ್ಯೆ 3,659ಕ್ಕೆ ಏರಿಕೆ ಆಗಿದೆ.
ದೆಹಲಿಗೆ ಮೂರನೇ ಸ್ಥಾನ:
ಇನ್ನು 3ನೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯ ಎಂದರೆ ಅದು ದೆಹಲಿ (ಎನ್ಆರ್ಸಿ). ರಾಷ್ಟ್ರ ರಾಜಧಾನಿಯಲ್ಲಿ 3,881 ಸಾವುಗಳು ಸಂಭವಿಸಿವೆ. ಮಂಗಳವಾರ 1,056 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿನ ಕೊರೊನಾ ಪ್ರಕರಣಗಳ ಒಟ್ಟು ಸಂಖ್ಯೆ 1,32,275 ಕ್ಕೆ ಏರಿಕೆಯಾಗಿದೆ.