ನವದೆಹಲಿ: ಸವಲತ್ತಿನ ಅಂಚಿನಲ್ಲಿರುವ ತೃತೀಯ ಲಿಂಗಿಗಳ ತಾರತಮ್ಯ ಕೊನೆಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅರೆಸೈನಿಕ ಪಡೆಗಳಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದವರ ನೇಮಕಕ್ಕೆ ನಿರ್ಧರಿಸಿದೆ.
ಕೇಂದ್ರ ಗೃಹ ಸಚಿವಾಲಯವು ಇದಕ್ಕಾಗಿಯೇ ಅರೆಸೈನಿಕ ಪಡೆಗಳ ವಿವಿಧ ಶಾಖೆಗಳ ಅಭಿಪ್ರಾಯವನ್ನು ಕೋರಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಇಂಡೋ - ಟಿಬೆಟ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ಮುಖ್ಯಸ್ಥರಿಗೆ ಪತ್ರ ಬರೆದಿದೆ.
ಭಾರತೀಯ ಅರೆಸೇನಾಪಡೆಗಳಲ್ಲಿ ತೃತೀಯ ಲಿಂಗಿಗಳ ನೇಮಕಕ್ಕೆ ಅವಕಾಶವಿಲ್ಲ. ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣೆ ವಿಧೇಯಕ-2019 ಈ ವರ್ಷದ ಜನವರಿಯಲ್ಲಿ ಕಾಯ್ದೆಯಾಗಿ ಜಾರಿಗೆ ಬಂದಿತ್ತು.
ಸಹಾಯಕ ಕಮಾಂಡೆಂಟ್‌ಗಳ ನೇಮಕಾತಿ ಪರೀಕ್ಷೆ ಡಿಸೆಂಬರ್‌ನಲ್ಲಿ ನಡೆಯಲಿದೆ. ಅರೆಸೈನಿಕ ಪಡೆಗಳ ವಿವಿಧ ಶಾಖೆಗಳ ಪ್ರತಿಕ್ರಿಯೆ ಸಕಾರಾತ್ಮಕವಾಗಿದ್ದರೇ ಕೇಂದ್ರ ಸಾರ್ವಜನಿಕ ಸೇವಾ ಆಯೋಗವು (ಯುಪಿಎಸ್‌ಸಿ) ತೃತೀಯ ಲಿಂಗಿಗಳನ್ನು ನೇಮಕಾತಿ ಪರೀಕ್ಷೆಯ ಅರ್ಜಿ ನಮೂನೆಗಳಲ್ಲಿ ಮೂರನೇ ಲಿಂಗವಾಗಿ ಸೇರಿಸಿಕೊಳ್ಳುತ್ತದೆ.