ಲಂಡನ್ (ಇಂಗ್ಲೆಂಡ್): ಇಂಗ್ಲೆಂಡ್ನಲ್ಲಿರುವ ವೈದ್ಯರ ಅಸೋಸಿಯೇಷನ್ ಒಂದರ ಮುಖ್ಯಸ್ಥನಾದ ಭಾರತೀಯ ಮೂಲದ ವೈದ್ಯರೊಬ್ಬರು ಅಲ್ಲಿ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರೊನಾ ವೈರಸ್ ವಿರುದ್ಧ ಪ್ರಾಣವನ್ನು ಪಣಕ್ಕಿಟ್ಟಿದ್ದು, ವೈಯಕ್ತಿಕ ರಕ್ಷಣಾ ಕಿಟ್ (ಪಿಪಿಇ) ನೀಡದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ ಕೌನ್ಸಿಲ್ ಅಧ್ಯಕ್ಷರಾದ ಡಾ.ಚಾಂದ್ ನಾಗ್ಪೌಲ್ ಈ ಬಗ್ಗೆ ಆದಷ್ಟು ಬೇಗ ಈ ಬಗ್ಗೆ ತನಿಖೆಯಾಗಬೇಕು. ನ್ಯಾಷನಲ್ ಹೆಲ್ತ್ ಸರ್ವೀಸ್ನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವೈದ್ಯರಿಗೂ ಕೂಡಾ ಪಿಪಿಇ ಕಿಟ್ಗಳು ದೊರೆಯುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನಾ ವೈರಸ್ ಫ್ಲೂ ಅಲ್ಲ. ಅಪರಿಚಿತ ಹಾಗೂ ಸೋಂಕಿನ ತೀವ್ರತೆ ಹೆಚ್ಚಿರುವ ವೈರಸ್ ವಿರುದ್ಧ ಹೋರಾಡುತ್ತಿದ್ದೇವೆ. ಈ ವೈರಸ್ನಿಂದ ಇಂಗ್ಲೆಂಡಿನಲ್ಲಿ 11 ವೈದ್ಯರನ್ನು ಸೇರಿ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ. ನಾವು ನಿಜವಾದ ವಿಪತ್ತನ್ನು ಎದುರಿಸುತ್ತಿದ್ದೇವೆ ಎಂದು ಈ ವೇಳೆ ಆರೋಪಿಸಿದ್ದಾರೆ.
ಲಂಡನ್ ಹಾಗೂ ಯಾರ್ಕ್ಶೈರ್ನಲ್ಲಿ ಮಾಸ್ಕ್, ಏಪ್ರಾನ್ ಹಾಗೂ ಪಿಪಿಇ ಕಿಟ್ಗಳು ತುಂಬಾ ಕಡಿಮೆ ಇದ್ದು, ವೈದ್ಯರನ್ನು ತುಂಬಾ ಕಷ್ಟದ ಸನ್ನಿವೇಶಕ್ಕೆ ದೂಡುತ್ತಿವೆ ಎಂದು ಈ ವೇಳೆ ಆರೋಪಿಸಲಾಗಿದೆ.
ಇತ್ತೀಚಿನ ಸಂಶೋಧನಾ ವರದಿಯಂತೆ ಇಂಗ್ಲೆಂಡಿನ ಅರ್ಧಕ್ಕೂ ಹೆಚ್ಚು ವೈದ್ಯರು ತುಂಬಾ ಅಪಾಯಕಾರಿ ವಾತಾವರಣದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.