ಹೊಸದಿಲ್ಲಿ: ಎರಡು ವರ್ಷಗಳ ಕಾಲ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಕಂಪನಿಗಳು ಜಾಹೀರಾತು ನೀಡುವುದನ್ನು ನಿಲ್ಲಿಸಬೇಕೆಂಬ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಲಹೆಯನ್ನು ಇಂಡಿಯನ್ ನ್ಯೂಸ್ಪೇಪರ್ ಸೊಸೈಟಿ ಖಂಡಿಸಿದೆ.
ಸೋನಿಯಾ ಸಲಹೆಯು ಮಾಧ್ಯಮಗಳ ಮೇಲೆ ಗಂಭೀರ 'ಹಣಕಾಸು ಸೆನ್ಸರ್ಶಿಪ್' ವಿಧಿಸುವ ರೀತಿಯಲ್ಲಿದೆ. ಮಾಧ್ಯಮ ಸ್ವಾತಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸೋನಿಯಾ ಗಾಂಧಿ ಈ ಕೂಡಲೇ ತಮ್ಮ ಸಲಹೆಯನ್ನು ವಾಪಸ್ ಪಡೆದುಕೊಳ್ಳಬೇಕೆಂದು ಐಎನ್ಎಸ್ ಆಗ್ರಹಿಸಿದೆ.
ಕೋವಿಡ್-19 ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪ್ರಧಾನಿಗೆ ಪತ್ರದ ಮೂಲಕ ಹಲವಾರು ಸಲಹೆಗಳನ್ನು ನೀಡಿದ್ದ ಸೋನಿಯಾ, ಮುಂದಿನ ಎರಡು ವರ್ಷ ಟಿವಿ, ಮುದ್ರಣ ಮಾಧ್ಯಮ ಹಾಗೂ ಆನ್ಲೈನ್ ಮಾಧ್ಯಮಗಳಿಗೆ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಕಂಪನಿಗಳು ಯಾವುದೇ ಜಾಹೀರಾತು ನೀಡದಂತೆ ಕಡಿವಾಣ ಹಾಕಬೇಕೆಂದು ತಿಳಿಸಿದ್ದರು.
"ಸೋನಿಯಾ ಗಾಂಧಿಯವರ ಸಲಹೆ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವಂಥದ್ದಾಗಿದೆ. ಸರ್ಕಾರ ಮಾಧ್ಯಮ ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವ ಹಣ ತೀರಾ ಕಡಿಮೆ ಪ್ರಮಾಣದಲ್ಲಿದೆ. ಆದರೂ ಅದು ಮಾಧ್ಯಮ ಸಂಸ್ಥೆಗಳಿಗೆ ದೊಡ್ಡ ಮೊತ್ತವಾಗಿದೆ. ದೇಶದ ಮುಕ್ತ ಪ್ರಜಾಪ್ರಭುತ್ವದ ಉಳಿವಿಗೆ ಮಾಧ್ಯಮಗಳ ಪಾತ್ರ ಮಹತ್ತರ." ಎಂದು ಐಎನ್ಎಸ್ ಅಧ್ಯಕ್ಷ ಶೈಲೇಶ ಗುಪ್ತಾ ಹೇಳಿದ್ದಾರೆ.
"ಮುದ್ರಣ ಮಾಧ್ಯಮಕ್ಕಾಗಿ ಪ್ರತ್ಯೇಕ ವೇತನ ಮಂಡಳಿ ಇದ್ದು, ಇಲ್ಲಿನ ನೌಕರರ ಸಂಬಳವನ್ನು ಸರ್ಕಾರವೇ ನಿರ್ಧರಿಸುತ್ತದೆ. ಮಾರುಕಟ್ಟೆ ಆಧಾರದಲ್ಲಿ ಸಂಬಳ ನಿರ್ಧರಿಸದೆ ಸರಕಾರವೇ ಸಂಬಳ ನಿರ್ಧರಿಸುವ ಏಕೈಕ ವಲಯ ಮುದ್ರಣ ಮಾಧ್ಯಮವಾಗಿದೆ. ಮುದ್ರಣ ಮಾಧ್ಯಮದ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ" ಎಂದು ಗುಪ್ತಾ ತಿಳಿಸಿದ್ದಾರೆ.
ಆರ್ಥಿಕ ಹಿಂಜರಿತ ಹಾಗೂ ಇನ್ನೂ ಹಲವಾರು ಕಾರಣಗಳಿಂದ ಜಾಹೀರಾತು ಆದಾಯ ಹಾಗೂ ಮಾರಾಟದಿಂದ ಬರುವ ಆದಾಯ ಗಣನೀಯ ಕುಸಿತ ಕಂಡಿದೆ. ಇಂಥ ಸಂದರ್ಭದಲ್ಲಿ ಮಾಧ್ಯಮಗಳಿಗೆ ಜಾಹೀರಾತು ನಿಲ್ಲಿಸಬೇಕೆಂಬ ಸೋನಿಯಾ ಗಾಂಧಿ ಸಲಹೆ ಮಾಧ್ಯಮ ಸಂಸ್ಥೆಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತದೆ. ಆದ್ದರಿಂದ ಸೋನಿಯಾ ಗಾಂಧಿ ತಕ್ಷಣ ತಮ್ಮ ಸಲಹೆಯನ್ನು ಹಿಂಪಡೆಯಬೇಕೆಂದು ಐಎನ್ಎಸ್ ಆಗ್ರಹಿಸಿದೆ.