ಲಡಾಖ್: ಪೂರ್ವ ಲಡಾಕ್‌ನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ನಿರಂತರವಾಗಿ ಮತ್ತು ವೇಗವಾಗಿ ವಸ್ತುಗಳ ಪೂರೈಕೆ ಖಾತ್ರಿಪಡಿಸುವ ಯಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.
ಚಿನೂಕ್ ಹೆಲಿಕಾಪ್ಟರ್‌ಗಳ ಜೊತೆಗೆ ಸಿ -17 ಮತ್ತು ಐಎಲ್ -76 ವಿಮಾನಗಳನ್ನು ಫಾರ್ವರ್ಡ್ ಪೋಸ್ಟ್ಗಳಿಗೆ ವಸ್ತುಗಳನ್ನು ಸರಬರಾಜು ಮಾಡಲು ಬಳಸುತ್ತಿವೆ. ಇವು ಭಾರತದ ಕೆಲವು ಭಾಗಗಳಿಂದ ಲಡಾಖ್‌ಗೆ ತಲುಪುತ್ತವೆ.
ಪ್ರತಿದಿನ ಈ ಎರಡು ದೊಡ್ಡ ವಿಮಾನಗಳಲ್ಲಿ ದೇಶದ ವಿವಿಧ ಭಾಗಗಳಿಂದ ಲಡಾಕ್‌ಗೆ ಟೆಂಟೇಜ್, ಬಟ್ಟೆ, ಆಹಾರ ಪದಾರ್ಥಗಳು, ನೀರಿನ ಬಾಟಲಿಗಳು ಮುಂತಾದ ಅಗತ್ಯ ಸಾಮಗ್ರಿಗಳು ಬರುತ್ತವೆ ಮತ್ತು ಅವುಗಳನ್ನು ಫಾರ್ವರ್ಡ್ ಪೋಸ್ಟ್ಗಳಿಗೆ ಕಳುಹಿಸಲಾಗುತ್ತದೆ.
ಟನ್ಗಳಷ್ಟು ಸರಕುಗಳನ್ನು ಸಾಗಿಸುವ ಸಾಮರ್ಥ್ಯದೊಂದಿಗೆ ಭಾರತೀಯ ವಾಯುಪಡೆಯಿಂದ ನಿರ್ವಹಿಸಲ್ಪಡುವ ಈ ವಿಮಾನಗಳು ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಯೊಂದಿಗೆ ಸಮನ್ವಯದಿಂದ ಅಡಚಣೆಯಿಲ್ಲದ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಕಾರ್ಯನಿರ್ವಹಿಸುತ್ತಿವೆ.
ದೊಡ್ಡ ವಿಮಾನಗಳಾದ ಸಿ -17 ಮತ್ತು ಐಎಲ್ -76 ವಿವಿಧ ಪ್ರದೇಶಗಳಿಂದ ಲಡಾಖ್‌ಗೆ ವಸ್ತುಗಳನ್ನು ತಂದಾಗ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ವಸ್ತುಗಳನ್ನು ಇಳಿಸಿದ ನಂತರ, ಸೈನ್ಯವು ಅವುಗಳನ್ನು ಸ್ಯಾನಿಟೈಸ್ ಮಾಡುತ್ತದೆ. ನಂತರ ಇವುಗಳನ್ನು ಚಿನೂಕ್ ಹೆಲಿಕಾಪ್ಟರ್‌ಗಳಿಗೆ ಸಾಗಿಸಲಾಗುತ್ತದೆ.
ಹೆಲಿಕಾಪ್ಟರ್‌ಗಳಿಗೆ ವಸ್ತುಗಳನ್ನು ಲೋಡ್ ಮಾಡಲಾಗುತ್ತದೆ. ತಕ್ಷಣವೇ ಫಾರ್ವರ್ಡ್ ಪ್ರದೇಶಗಳಲ್ಲಿನ ಬೇರೆ ಬೇರೆ ಸ್ಥಳಗಳಿಗೆ ಇವುಗಳು ತಲುಪುತ್ತವೆ. ಇಡೀ ದಿನ ಈ ಹೆಲಿಕಾಪ್ಟರ್‌ಗಳು ಅಗತ್ಯ ವಸ್ತುಗಳನ್ನು ಇತರ ಪ್ರಮುಖ ಸರಕುಗಳೊಂದಿಗೆ ಸೈನಿಕರು ಮತ್ತು ಫಾರ್ವರ್ಡ್ ಪೋಸ್ಟ್ಗಳಲ್ಲಿ ನಿಯೋಜಿಸಲಾಗಿರುವ ಘಟಕಗಳಿಗೆ ಪೂರೈಸಲು ಹಲವು ಬಾರಿ ಪ್ರಯಾಣ ನಡೆಸುತ್ತವೆ.
ಭಾರತೀಯ ಸೇನೆಯ ಅಧಿಕಾರಿಗಳ ಪ್ರಕಾರ, ಬೇರೆ ನಗರ ಅಥವಾ ರಾಜ್ಯದಿಂದ ವಸ್ತುಗಳನ್ನು ಲೋಡ್ ಮಾಡುವುದರಿಂದ ಹಿಡಿದು ಫಾರ್ವರ್ಡ್ ಪ್ರದೇಶಗಳಿಗೆ ಸರಕುಗಳನ್ನು ಸಾಗಿಸುವುದು ಕೇವಲ ಒಂದೆರಡು ಗಂಟೆಗಳ ಪ್ರಕ್ರಿಯೆಯಾಗಿದೆ. ಇದು ವೇಗವಾಗಿ ನಡೆಯಲಿದ್ದು, ಯಾವುದೇ ವಸ್ತುಗಳು ಫಾರ್ವರ್ಡ್ ಪೋಸ್ಟ್ಗಳನ್ನು ಕೆಲವೇ ಗಂಟೆಗಳಲ್ಲಿ ತಲುಪಬಹುದು ಎಂದಿದ್ದಾರೆ.