ನವದೆಹಲಿ: ಚೀನಾದೊಂದಿಗಿನ ಗಡಿ ವಿವಾದದ ನಡುವೆ ಮಹತ್ವದ ಹೆಜ್ಜೆ ಇಟ್ಟಿರುವ ಭಾರತವು 15 ದಿನಗಳ ಯುದ್ಧಕ್ಕಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದಾಸ್ತಾನು ಹೆಚ್ಚಿಸಲು ರಕ್ಷಣಾ ಪಡೆಗಳಿಗೆ ಅಧಿಕಾರ ನೀಡಿದೆ.
ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದ ಮುಂದುವರೆಯುತ್ತಲೇ ಇದೆ. ಎರಡೂ ದೇಶಗಳ ಕಮಾಂಡರ್ ಮಟ್ಟದ ಸಭೆಗಳು ನಡೆಯುತ್ತಿದ್ದರೂ ಶಾಂತಿ ಸ್ಥಾಪನೆಯ ಸಾಧ್ಯತೆಗಳು ಕಾಣುತ್ತಿಲ್ಲ. ಹೀಗಾಗಿ 50,000 ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯ ಮತ್ತು ವಿದೇಶಿ ಮೂಲಗಳಿಂದ ಯುದ್ಧದ ಉಪಕರಣಗಳನ್ನು ಸಂಗ್ರಹಿಸಲು ಭಾರತ ಮುಂದಾಗಿದೆ.
ಓದಿ: ಚೀನಾ ಗಡಿ ಸಂಘರ್ಷ.. ಶತ್ರುಗಳ ಕಣ್ಣು ಕುಕ್ಕಲಿದೆ 'ಆಕಾಶ್ ಕ್ಷಿಪಣಿ'
ಕೆಲ ವರ್ಷಗಳ ಹಿಂದೆ 40 ದಿನಗಳ ಯುದ್ಧಕ್ಕೆ ಬೇಕಾಗುವಷ್ಟು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲಾಗುತ್ತಿತ್ತು. ಬಳಿಕ ಅದನ್ನು 10 ದಿನಕ್ಕೆ ಇಳಿಸಲಾಯಿತು. ಆದರೆ ಈಗ ಕನಿಷ್ಠ 15 ದಿನಗಳ ತೀವ್ರ ಯುದ್ಧಕ್ಕೆ ಅಗತ್ಯವಿರುವಷ್ಟು ಸಲಕರಣೆಗಳನ್ನು ಸಂಗ್ರಹಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ಮೂಲಕ ತುರ್ತು ಪರಿಸ್ಥಿತಿ ಬಂದರೆ ಚೀನಾ ಅಥವಾ ಪಾಕಿಸ್ತಾನ ರಾಷ್ಟ್ರಗಳನ್ನು ಹಿಮ್ಮೆಟ್ಟಿಸಲು ಯುದ್ಧದಲ್ಲಿ ಮುಖಾಮುಖಿಯಾಗಲು ಭಾರತ ಸನ್ನದ್ಧವಾಗಿದೆ ಎಂದು ಹೇಳಲಾಗಿದೆ.
ಈಗಾಗಲೇ ಒಂದಿಷ್ಟು ಪ್ರಮಾಣದ ಕ್ಷಿಪಣಿಗಳು, ಟ್ಯಾಂಕರ್ಗಳು, ಫಿರಂಗಿ ಹಾಗೂ ಮದ್ದುಗುಂಡುಗಳನ್ನು ರಕ್ಷಣಾ ಪಡೆ ಸಂಗ್ರಹಿಸಿಟ್ಟುಕೊಂಡಿದೆ. ಈಗ ದಾಸ್ತಾನು ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ.