ತೇಜ್ಪುರ್ (ಅಸ್ಸೋಂ): ತಮೆಂಗ್ಲಾಂಗ್ ಜಿಲ್ಲೆಯ ತೌಬಾಮ್ ಗ್ರಾಮದಲ್ಲಿ ಇಂಫಾಲ್ ಹಾಗೂ ಜಿರಿಬಾಮ್ಗಳನ್ನು ಸಂಪರ್ಕಿಸುವ ಎನ್ಹೆಚ್-37ರಲ್ಲಿನ ಇರಾಂಗ್ ಸೇತುವೆ ಮರು ನಿರ್ಮಾಣ ಕಾರ್ಯವನ್ನು ಭಾರತೀಯ ಸೇನೆ ಮುಗಿಸಿದೆ.
ಇದಕ್ಕೂ ಮೊದಲು ನವೆಂಬರ್ 1ರಂದು ಈ ಸೇತುವೆ ಕುಸಿದ ಪರಿಣಾಮ ಮರಳು ತುಂಬಿದ್ದ ಟ್ರಕ್ ಮೇಲಿನಿಂದ ನದಿಗೆ ಉರುಳಿ ಚಾಲಕ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ನವೆಂಬರ್ 2ರಂದು ರಾಜ್ಯ ಸರ್ಕಾರದಿಂದ ಹಣಕಾಸು ಸಹಾಯಕ್ಕಾಗಿ ಮನವಿ ಮಾಡಿದ ಬಳಿಕ ವಿಶೇಷ ಇಂಜಿನಿಯರಿಂಗ್ ತಂಡವು ಸೇತುವೆ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿತ್ತು. ಈ ಸೇತುವೆ ಮರುನಿರ್ಮಾಣ ಕಾರ್ಯವು ಟೆಂಗೌನ್ಪಾಲ್ನ ಬಳಕೆಗೆ ಯೋಗ್ಯವಲ್ಲದ ಸೇತುವೆಯನ್ನು ಉರುಳಿಸುವುದು ಹಾಗೂ ಸೇತುವೆ ನಿರ್ಮಾಣಕ್ಕೆ 152 ಕಿ.ಮೀನಿಂದ ಸರಕು ಸಾಗಿಸುವ ಕಾರ್ಯ ಸಹ ಒಳಗೊಂಡಿತ್ತು.
ಸೇತುವೆ ನಿರ್ಮಾಣ ಕಾರ್ಯವು ನವೆಂಬರ್ 9ರಂದು ಆರಂಭಗೊಂಡಿತು. ಆದರೆ ಕೆಲ ಅಡಚಣೆಗಳ ಕಾರಣದಿಂದಾಗಿ ಸೇತುವೆ ಕಾರ್ಯ ನಿಧಾನಗೊಂಡಿತ್ತು. ಸೇತುವೆ ನಿರ್ಮಾಣಕ್ಕೆ ಬೇಕಾಗಿದ್ದ ಅಗತ್ಯ ಸರಕುಗಳನ್ನು ಭಾರತೀಯ ಸೇನೆಯ ಸಹಾಯದೊಂದಿಗೆ ಗಡಿ ರಸ್ತೆ ನಿರ್ಮಾಣ ಸಂಸ್ಥೆ ಒದಗಿಸಿದೆ. ಸೇತುವೆಯ ಕಾರ್ಯವು ನವೆಂಬರ್ 27ರಂದು ಪೂರ್ಣಗೊಂಡು, ಬಳಕೆಗೆ ಲಭ್ಯವಾಗಿದೆ.
ಮಣಿಪುರ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್ ಅವರು ನಿನ್ನೆ ಈ ಸೇತುವೆಯನ್ನು ಉದ್ಘಾಟಿಸಿದ್ದು, ಸೇತುವೆ ನಿರ್ಮಾಣಕ್ಕಾಗಿ ಶ್ರಮಿಸಿದ ಭಾರತೀಯ ಸೇನೆ ಹಾಗೂ ಎನ್ಹೆಚ್ಐಡಿಸಿಎಲ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.