ದೆಹಲಿ: ಇಂದು ಅಮೆರಿಕಾ ಹಾಗೂ ಭಾರತದ ನಡುವೆ 2+2 ಸಚಿವರ ಸಂವಾದದ 3 ನೇ ಆವೃತ್ತಿ ನಡೆಯುತ್ತಿದೆ. ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ನಡೆಯುತ್ತಿರುವ ಸಂವಾದದಲ್ಲಿ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ.ಎಸ್ಪರ್ ಹಾಗೂ ಭಾರತದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ವಿದೇಶಾಂಗ ಸಚಿವ ಜೈ ಶಂಕರ್ ಭಾಗಿಯಾಗಿದ್ದಾರೆ.
ಪೂರ್ವ ಲಡಾಖ್ ವಿಚಾರವಾಗಿ ಇಂಡೋ-ಚೀನಾ ಗಡಿಯಲ್ಲಿ ಉಭಯ ರಾಷ್ಟ್ರಗಳ ಸೇನೆ ಬೀಡು ಬಿಟ್ಟಿದ್ದು, ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಭಾರತ ಹಾಗೂ ಅಮೆರಿಕಾ ನಡುವೆ ನಡೆಯುತ್ತಿರುವ ಸಂವಾದ ಮಹತ್ವ ಪಡೆದುಕೊಂಡಿದೆ.
ಸಂವಾದದಲ್ಲಿ ಎರಡೂ ದೇಶಗಳ ಪ್ರಮುಖ ನಾಯಕರು ಪ್ರತ್ಯೇಕವಾಗಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿ, ಬಿಕಾ (ಪ್ರಾದೇಶಿಕ ಸಹಕಾರಕ್ಕಾಗಿ ಮೂಲ ವಿನಿಮಯ ಮತ್ತು ಸಹಕಾರ) ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಒಪ್ಪಿವೆ. ಇದು ಭವಿಷ್ಯದ ಮಿಲಿಟರಿ ಸಂಬಂಧಗಳ ವಿಸ್ತರಣೆಗೆ ಸಹಕಾರಿಯಾಗಲಿವೆ.
ಸವಾಲುಗಳನ್ನು ಮುಂದಿಟ್ಟುಕೊಂಡು ವ್ಯವಹಾರ: ರಾಜನಾಥ್ ಸಿಂಗ್
ಇಂಡೋ-ಯುಎಸ್ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳು. ಕೋವಿಡ್ನಿಂದಾಗಿ ನಮ್ಮ ದೇಶದ ಆರ್ಥಿಕತೆ ನೆಲ ಕಚ್ಚಿದೆ. ಕೈಗಾರಿಗಳು, ಸೇವಾ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಪ್ರಸ್ತುತ ನಮ್ಮ ಮುಂದಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸಬೇಕಿದೆ ಎಂದು ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಜಾಗತಿಕ ಸವಾಲು ಎದುರಿಸಲು ಒಂದಾಗಿ ಹೋರಾಟ : ಜೈ ಶಂಕರ್
ಕಳೆದ ಎರಡು ದಶಕಗಳಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಿದೆ. ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ನಾವೀಗ ಒಂದಾಗಿ ಹೋರಾಡಬೇಕಿದೆ. ಆಗ ಮಾತ್ರ ಏನಾದರೂ ಬದಲಾವಣೆ ಸಾಧ್ಯ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದರು.
ಚೀನಾ ಹಣಿಯಲು ಸುವರ್ಣಾವಕಾಶ: ಪೊಂಪಿಯೊ
ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಪ್ರತಿಕ್ರಿಯಿಸಿ, ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು ಹತ್ತಿರವಾಗಲು ಇದು ಸುವರ್ಣಾವಕಾಶ. ಇಂದು ನಾವು ಕೋವಿಡ್ ಜತೆಗೆ ಚೀನಾದ ಕಮ್ಯುನಿಸ್ಟ್ ಪಕ್ಷದ ಬೆದರಿಕೆಗಳನ್ನೂ ಎದುರಿಸಬೇಕಿದೆ. ಎರಡೂ ದೇಶಗಳಲ್ಲಿ ಶಾಂತಿ ನೆಲೆಸಬೇಕಾದರೆ ಇಂದಿನ ಚರ್ಚೆ ಬಹಳ ಮುಖ್ಯ ಎಂದರು.
ಇಂಡೋ - ಪೆಸಿಫಿಕ್ ತತ್ವಗಳಿಗೆ ಬದ್ಧ: ಮಾರ್ಕ್ ಎಸ್ಪರ್
ರಕ್ಷಣಾ ಮತ್ತು ಭದ್ರತಾ ಪಾಲುದಾರಿಕೆಯಲ್ಲಿ ಪ್ರಾದೇಶಿಕ ಭದ್ರತೆ ಬಲಪಡಿಸಿದ್ದೇವೆ. ಇಂಡೋ ಪೆಸಿಫಿಕ್ ತತ್ವಗಳಿಗೆ ನಮ್ಮ ಸಹಕಾರ ಬದ್ಧವಾಗಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಹೇಳಿದ್ದಾರೆ.
ಉಭಯ ರಾಷ್ಟ್ರಗಳಲ್ಲಿ ಸುರಕ್ಷಿತ, ಸ್ಥಿರ ಹಾಗೂ ಶಾಂತಿಯುತ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಈ ಸಭೆ ನಡೆದಿದ್ದು, ದೇಶದ ಅಭಿವೃದ್ಧಿಗೆ, ಸವಾಲುಗಳನ್ನು ಎದುರಿಸಲು ಪರಸ್ಪರ ಸಹಕಾರ ನೀಡುವುದಾಗಿ ಹೇಳಿಕೊಂಡಿವೆ ಎಂದು ತಿಳಿದು ಬಂದಿದೆ.